ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಎರಡನೇ ಪೂರ್ವಭಾವಿ ಪರೀಕ್ಷೆಯ ಸಂಬಂಧ ಯುಕೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಶಿಕ್ಷಣಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಡಿ.ಉದಯ್ ಕುಮಾರ್, ನಾಗರಾಜಯ್ಯ ಇತರರು ಇದ್ದರು. 
ಮೈಸೂರು

ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಶ್ರಮಿಸಿ: ಅಧಿಕಾರಿಗಳಿಗೆ ಸಿಇಒ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಎರಡನೇ ಪೂರ್ವಭಾವಿ ಪರೀಕ್ಷೆಯ ಫಲಿತಾಂಶದಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದೆ
  • ತಾಲೂಕು ಮಟ್ಟದ ಅಧಿಕಾರಿಗಳು ವೈಯಕ್ತಿಕ ನಿಗಾ ವಹಿಸಬೇಕು
  • ಅತಿ ಹೆಚ್ಚು ಮಕ್ಕಳು ನೋಂದಣಿಯಾಗಿರುವ ಶಾಲೆಗಳನ್ನು ನಿರಂತರ ಭೇಟಿ ನೀಡುವ ಮೂಲಕ ಅವಲೋಕಿಸಬೇಕು
ಮೈಸೂರು:ಹಬ್ಬ, ಜಾತ್ರೆಗಳಂತೆಯೇ ಪರೀಕ್ಷೆಗಳಿಗೂ ಹೆಚ್ಚಿನ ಕಾಳಜಿವಹಿಸೋಣ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್‌ಕುಮಾರ್ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಎರಡನೇ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ವಿಶ್ಲೇಷಣಾ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳೀಯ ರಜೆಗಳನ್ನು ನೀಡದೆ, ಉಳಿದಿರುವ ದಿನಗಳಲ್ಲಿ ಎಸ್‌ಎಸ್‌ಎಲ್ಸಿ ಫಲಿತಾಂಶ ವೃದ್ಧಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೇಳಿದರು.
ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಪಡೆದಿದ್ದ ಶಾಲೆಗಳು, ಪ್ರಸ್ತುತ ಎರಡನೇ ಪೂರ್ವಭಾವಿ ಪರೀಕ್ಷೆಯ ಫಲಿತಾಂಶದಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದ್ದು, ಅಂತಹ ಶಾಲೆಗಳ ಮೇಲೆ ತಾಲೂಕು ಮಟ್ಟದ ಅಧಿಕಾರಿಗಳು ವೈಯಕ್ತಿಕ ನಿಗಾ ವಹಿಸಬೇಕು. ಜತೆಗೆ ಅತಿ ಹೆಚ್ಚು ಮಕ್ಕಳು ನೋಂದಣಿಯಾಗಿರುವ ಶಾಲೆಗಳನ್ನು ನಿರಂತರ ಭೇಟಿ ನೀಡುವ ಮೂಲಕ ಅವಲೋಕಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನದೊಳಗೆ ಮೈಸೂರು ಜಿಲ್ಲೆ ಇರುವಂತೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಉದಯ್ ಕುಮಾರ್, ಡಯಟ್ ಪ್ರಾಂಶುಪಾಲ ನಾಗರಾಜಯ್ಯ, ಜಿಲ್ಲೆಯ ಎಲ್ಲ ಒಂಬತ್ತು ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಯಕ್ರಮದ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರ ಕಚೇರಿ ಅಧಿಕಾರಿಗಳು ಇದ್ದರು.