; ಹುಣಸೂರು ನಗರದ ಬೈಪಾಸ್ ರಸ್ತೆ ಕಾಮಗಾರಿ ಸ್ಥಗಿತಗೊಂಡ ಪರಿಣಾಮ ಗುಂಡಿಯಲ್ಲಿ ಚರಂಡಿ ನೀರು ಶೇಖರಣೆಗೊಂಡಿರುವುದು.
- ದುರ್ವಾಸನೆಯಿಂದ ಸ್ಥಳೀಯರಿಗೆ ತೊಂದರೆ
ಹುಣಸೂರು: ನಗರ ವ್ಯಾಪ್ತಿಯ ಮೈಸೂರು-ಮಡಿಕೇರಿ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ಒಳಚರಂಡಿ ನೀರು ತೆರೆದ ಗುಂಡಿಯಲ್ಲಿ ಶೇಖರಣೆಗೊಂಡು ಇಡೀ ವಾತಾವರಣ ದುರ್ವಾಸನೆಯಿಂದ ಕೂಡಿದೆ. ಕೂಡಲೇ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸಮಸ್ಯೆ ಪರಿಹರಿಸಬೇಕು ಎಂದು ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗಣ್ಣ ದೇವಾಡಿಗ ಒತ್ತಾಯಿಸಿದರು.
ಹಲವು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಅಲ್ಲಲ್ಲಿ ಗುಂಡಿಗಳನ್ನು ಅಗೆದಿದ್ದಾರೆ. ಈ ನಡುವೆ ಮಳೆ, ಒಳಚರಂಡಿ ನೀರು ಎಲ್ಲವೂ ಗುಂಡಿಗಳಲ್ಲಿ ಶೇಖರಣೆಗೊಂಡು ವ್ಯಾಪಾರಿಗಳು ಮತ್ತು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ನಗರಸಭೆ ಇದಕ್ಕೂ ತನಗೂ ಸಂಬಂಧಿವಿಲ್ಲವೆಂದು ಕೈತೊಳೆದುಕೊಂಡು ಕುಳಿತಿದೆ. ಹೆದ್ದಾರಿ ಪ್ರಾಧಿಕಾರದ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ರೋಗರುಜಿನಗಳು ಹರಡುವ ಸಾಧ್ಯತೆಯಿದ್ದು, ಈ ಕೂಡಲೇ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.