ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ರಸ್ತೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ಕೆ.ವೆಂಕಟೇಶ್, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಕೆ.ಸಿ.ಸತೀಶ್, ಮೈಸೂರು ವಿಭಾಗದ ಅಧೀಕ್ಷಕ ಇಂಜಿನಿಯರ್ ಸಿ.ಎಸ್.ಮಂಜು ಇತರರು ಇದ್ದರು.  
ಮೈಸೂರು

ಮೂಲಸೌಕರ್ಯಗಳ ಬಲವರ್ಧನೆಗೆ ಒತ್ತು

ಎ. ಆರ್. ರಘುರಾಮ
ಬೆಟ್ಟದಪುರ: ಗ್ರಾಮೀಣ ಭಾಗದ ಮೂಲಸೌಕರ್ಯಗಳ ಬಲವರ್ಧನೆಗೆ ರಾಜ್ಯ ಸರ್ಕಾರ ಒತ್ತು ನೀಡಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಮೇಗಲಕೊಪ್ಪಲು ಬಳಿ ಚಾಲನೆ ನೀಡಿ ಮಾತನಾಡಿದರು. ಇತಿಹಾಸ ಪ್ರಸಿದ್ಧ ದೇವಾಲಯಕ್ಕೆ ರಸ್ತೆ ನಿರ್ಮಿಸುವ ಕಾರ್ಯಾರಂಭದ ಮೂಲಕ ತಾಲೂಕಿನ ಅಭಿವೃದ್ಧಿಗೆ ಹೊಸ ಪರ್ವ ಆರಂಭವಾಗಿದೆ. ಹಲವು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವಲ್ಲಿ ಶಾಸಕ ಕೆ.ವೆಂಕಟೇಶ್ ಆಸಕ್ತಿ ವಹಿಸಿದ್ದು, ಸರ್ಕಾರ ಸಾಥ್ ನೀಡಲಿದೆ ಎಂದರು.
ಹಸ್ತಕ್ಷೇಪವಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಪಿರಿಯಾಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ವಿಚಾರದಲ್ಲಿ ಯಾವುದೇ ಶಾಸಕ, ಸಚಿವರ ಹಸ್ತಕ್ಷೇಪ ಇಲ್ಲವೆಂದರು. ಈ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಈಗಾಗಲೇ ಮನವಿ ಮಾಡಿದೆ. ಕೇಂದ್ರದ ಅಧಿಕಾರಿಗಳ ತಂಡ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು. ಸೆ. 21ರಿಂದ ಆರಂಭವಾಗುವ ವಿಶೇಷ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು ಎಂದರು.
ಶಾಸಕ ಕೆ.ವೆಂಕಟೇಶ್ ಮಾತನಾಡಿ, ಸಾವಿರಾರು ಭಕ್ತರ ಮತ್ತು ಸ್ಥಳೀಯರ ಬಹುವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ರಸ್ತೆ ನಿರ್ಮಾಣದಿಂದ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್‌ನಲ್ಲಿ ಕೆಲವೆಡೆ ಸೋರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಪರಿಶೀಲನೆ ನಡೆಸಿ ಯೋಜನೆಯನ್ನು ಈ ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಇದೇ ಸಂದರ್ಭ ಅತಿಥಿಗಳು ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಸರ್ಕಾರಿ ಪ್ರವಾಸಿ ಮಂದಿರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಕೆ.ಸಿ.ಸತೀಶ್, ಮೈಸೂರು ವಿಭಾಗದ ಅಧೀಕ್ಷಕ ಇಂಜಿನಿಯರ್ ಸಿ.ಎಸ್.ಮಂಜು, ಪಿರಿಯಾಪಟ್ಟಣ ಎಇಇ ಬಿ.ಕೆ.ಯೋಗಾನಂದ, ಇತರರು ಉಪಸ್ಥಿತರಿದ್ದರು.