ಮೈಸೂರು ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ಗುರುವಾರ ‘ಅಂಬೇಡ್ಕರ್ ಮತ್ತು ಮಹಿಳಾ ಪ್ರಗತಿ ’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಪ್ರೊ.ಎಂ.ಕೆ.ಸವಿತಾ ಉದ್ಘಾಟಿಸಿದರು. ಡಾ.ಸಾಬೀರ ಅಹ್ಮದ್ ಮುಲ್ಲಾ, ಡಿ.ಎಸ್.ಪ್ರತಿಮಾ, ಪ್ರೊ.ಎಂ.ಎಸ್.ಸವಿತಾ ಹಾಗೂ ಇತರರು ಇದ್ದರು.
ಮೈಸೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಸ್ಪರ್ಧಿಸಲು ಮೀಸಲಾತಿ ಹಾಗೂ ಋತುಚಕ್ರದ ರಜೆ ದೊರೆತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಪ್ರೊ.ಎಂ.ಕೆ.ಸವಿತಾ ಹೇಳಿದರು.
ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಗುರುವಾರ ‘ಅಂಬೇಡ್ಕರ್ ಮತ್ತು ಮಹಿಳಾ ಪ್ರಗತಿ ’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ಸಂದರ್ಭ ಜಾತಿ ಕಾರಣಕ್ಕೆ ನಡೆಯುವ ಶೋಷಣೆ ಹಾಗೂ ಮಹಿಳಾ ಸಬಲೀಕರಣ ಕುರಿತು ಪ್ರಬಂಧ ಮಂಡಿಸಿದ್ದರು. ದೇಶದಲ್ಲಿ ಮಹಿಳೆಯರಿಗೆ ಸಮಾನತೆ ದೊರಕಿಸಿಕೊಡಲು ಅವರು ಸಾಕಷ್ಟು ಹೋರಾಟ ನಡೆಸಿದರು ಎಂದು ಸ್ಮರಿಸಿದರು.
ಮಹಿಳೆಯರಿಗೆ ಮತದಾನ ಹಕ್ಕು, ಸಮಾನತೆಯ ಹಕ್ಕುಗಳಿಗಾಗಿ ಅಂಬೇಡ್ಕರ್ ಹೋರಾಟ ನಡೆಸಿದರು. ಮಹಿಳೆಯರಿಗೆ ಹೆರಿಗೆ ರಜೆ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಅವರ ಆಶಯದಿಂದ ಇದೀಗ ರಾಜ್ಯ ಸರ್ಕಾರ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ರಜೆ ಘೋಷಣೆ ಮಾಡಿದೆ ಎಂದರು.
ಅಂಬೇಡ್ಕರ್ ದೇಶದ ಮೊದಲ ಕಾರ್ಮಿಕ ಸಚಿವರಾದ ಸಂದರ್ಭ ಹಿಂದೂ ಕೋಡ್ ಬಿಲ್ ಜಾರಿಗೆ ಪಣ ತೊಟ್ಟರು. ಆದರೆ, ಬಹುತೇಕ ಹಿಂದುತ್ವದ ಪ್ರತಿಪಾದಿಕರು, ಜನಪ್ರತಿನಿಧಿಗಳು ಬಿಲ್‌ಗೆ ವಿರೋಧ ವ್ಯಕ್ತಪಡಿಸಿದರು. ಆ ಸಂದರ್ಭ ಮಹಿಳೆಯರ ಹಕ್ಕುಗಳಿಗಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಏಕೈಕ ಮಹಾನ್ ಪುರುಷ ಅಂಬೇಡ್ಕರ್ ಎಂದರು.
ಇಂದಿಗೂ ನಿತ್ಯ ಮಹಿಳೆಯರು ಮಾನಸಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಪುರುಷ ಪ್ರಧಾನ ವ್ಯವಸ್ಥೆಯಿಂದ ಅಸಮಾನತೆ ಹೆಚ್ಚುತ್ತಿದೆ. ಇದನ್ನು ಮೆಟ್ಟಿ ನಿಲ್ಲಬೇಕಾದರೆ ಮಹಿಳೆಯರಿಗೆ ಜ್ಞಾನ ಮುಖ್ಯ. ಹೀಗಾಗಿ ಪತ್ರಿಕೆ, ಸಾಹಿತ್ಯ, ದಾರ್ಶನಿಕರು, ಸಮಾಜ ಸುಧಾಕರ ಜೀವನದ ಹೋರಾಟಗಳನ್ನು ಓದುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಮಹಿಳೆಯರ ಕಳ್ಳಸಾಗಾಣಿಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಚಿಕ್ಕ ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕುವ ಕ್ರೂರ ಪ್ರಕರಣಗಳು ಪ್ರಪಂಚವನ್ನು ಬೆಚ್ಚಿ ಬೀಳಿಸಿದೆ ಎಂದರು.
ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣ ಕೇಂದ್ರ ನಿರ್ದೇಶಕ ಡಾ.ಸಾಬೀರ ಅಹ್ಮದ್ ಮುಲ್ಲಾ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಿ.ಎಸ್.ಪ್ರತಿಮಾ, ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ಎಸ್.ಸವಿತಾ ಇದ್ದರು.