ಸಬೀಹಾ ಭೂಮಿಗೌಡ  
ಮೈಸೂರು

ಮಹಿಳಾ ರಾಜಕೀಯ ಮೀಸಲಾತಿ ವಿಳಂಬ ಸಲ್ಲದು: ಸಬೀಹಾ ಭೂಮಿಗೌಡ ಬೇಸರ

ಪ್ರಮುಖ ಮುಖ್ಯಾಂಶಗಳು

  • ಗಣತಿ, ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆಗೂ ಮಹಿಳಾ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ
  • ಮೂರು ವರ್ಷದಿಂದ ಮಹಿಳಾ ರಾಜಕೀಯ ಮೀಸಲಾತಿ ವಿಳಂಬವಾಗಿದೆ
ಮೈಸೂರು:ಕ್ಷೇತ್ರ ಮರುವಿಂಗಡಣೆ ನೆಪದಲ್ಲಿ ಮಹಿಳಾ ರಾಜಕೀಯ ಮೀಸಲಾತಿ ಮಸೂದೆಯನ್ನು ಮುಂದೂಡುವುದು ಸರಿಯಲ್ಲ ಎಂದು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಸಬೀಹಾ ಭೂಮಿಗೌಡ ಹೇಳಿದರು.
ಮಹಿಳಾ ರಾಜಕೀಯ ಮೀಸಲಾತಿ ಕಾಯ್ದೆ ಮಸೂದೆ, ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಲಾಗಿದೆ. ಈ ಕಾರಣದಿಂದ ಮೂರು ವರ್ಷ ದಿಂದ ಮಹಿಳಾ ರಾಜಕೀಯ ಮೀಸಲಾತಿ ವಿಳಂಬವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಗಣತಿ, ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆಗೂ ಮಹಿಳಾ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಈ ಕುರಿತ ತಿದ್ದುಪಡಿ ಮಸೂದೆಯನ್ನು ವಿರೋಧ ಪಕ್ಷಗಳು ಯಶಸ್ವಿಯಾಗಿ ಸೋಲಿಸಿದ್ದು ಸ್ವಾಗತಾರ್ಹ ಸಂಗತಿ ಎಂದು ಹೇಳಿದರು.
2023ರಲ್ಲೇ ಈ ಕಾಯ್ದೆ ಅಂಗೀಕಾರಗೊಂಡಿದ್ದರೂ ಮಹಿಳಾ ಮೀಸಲಾತಿ ಕಾಯ್ದೆಯೊಡನೆ ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆ ಸೇರಿಸಿರುವುದು ಸರಿಯಲ್ಲ. ಈ ಕುರಿತು ಯಾವುದೇ ಷರತ್ತು ಇರಬಾರದು. ಭಾರತದ ಒಕ್ಕೂಟ ವ್ಯವಸ್ಥೆ ಬಲಪಡಿಸುವ ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳ ಕಳಕಳಿ ಗುರುತಿಸುವ ಕ್ರಮವಾಗಿ, ಮಹಿಳೆಯರಿಗಾಗಿ ಕಾಯ್ದಿರಿಸಲಾದ ಶೇ.33ಸೀಟುಗಳನ್ನು ಸಂಸತ್ತಿನಲ್ಲಿ ಪ್ರಸ್ತುತ ಇರುವ ರಾಜ್ಯಗಳ ಸೀಟುಗಳ ಹಂಚಿಕೆಗೆ ಅನುಗುಣವಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಜಾನಪದ ತಜ್ಞ ಪ್ರೊ. ಕಾಳಚನ್ನೇಗೌಡ ಮಾತನಾಡಿ, ಪ್ರಸ್ತುತ ರಾಜ್ಯಗಳ ಒಟ್ಟು ಸೀಟುಗಳ ಪಾಲಿಗೆ ಅನುಗುಣವಾಗಿ ಶೇ.33ರಷ್ಟು ಸೀಟುಗಳನ್ನು ಹಂಚಿಕೆ ಮಾಡಲು ಹೊಸ ಉಪನಿಯಮ ಸೇರಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಹಕ್ಕುಗಳನ್ನು ಖಚಿತ ಪಡಿಸಬೇಕು ಎಂದು ಒತ್ತಾಯಿಸಿದರು.
ಹಿಂದುಳಿದ ವರ್ಗಗಳು, ಅಲೆಮಾರಿ, ವಿಮುಕ್ತ ಬುಡಕಟ್ಟುಗಳ, ತೃತೀಯ ಲಿಂಗಿಗಳು ಅಲ್ಲದ ಮಹಿಳೆಯರಲ್ಲೂ ದುರ್ಬಲ, ಸೌಲಭ್ಯ ವಂಚಿತ ಮಹಿಳೆಯರಿಗೆ ಸೀಟುಗಳ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರರಾದ ಎಂ.ಎಸ್.ಸುಮನಾ, ವಸಂತ, ಶ್ರೀದೇವಿ, ನಾಗವೇಣಿ ಇದ್ದರು.