ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ.ಬಿ.ಸಿ.ಸುರೇಶ್, ಎಚ್.ಸಿ.ಹೇಮಾಮಾಲಿನಿ, ರೇವತಿ ಶೆಟ್ಟಿ ಇತರರಿದ್ದರು.
ಹುಣಸೂರು: ಒಂದು ಹೆಣ್ಣಾಗಿ ನನ್ನ ಬಗ್ಗೆ ನಾನು ಗೌರವವಿಟ್ಟುಕೊಳ್ಳುವುದೇ ಮಹಿಳಾ ದಿನಾಚರಣೆಯ ಮೂಲ ಆಶಯವಾಗಿದೆ ಎಂದು ಚಂದನವಾಹಿನಿಯ ನಿರೂಪಕಿ, ಸಾಹಿತಿ ರೇವತಿ ಶೆಟ್ಟಿ ಅಭಿಪ್ರಾಯಪಟ್ಟರು
ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಕುಂದುಕೊರತೆ ಘಟಕ, ಮಹಿಳಾ ಸಬಲೀಕರಣ ಘಟಕ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗ ತಾರತಮ್ಯ, ಸಮಾನತೆ, ಸಮಾನಹಕ್ಕುಗಳು ಇವೆಲ್ಲವುಗಳನ್ನು ಗಳಿಸಲು ಚಳವಳಿಯ ರೂಪದಲ್ಲಿ ಆರಂಭಗೊಂಡ ಮಹಿಳೆಯರ ಹೋರಾಟ ವಿಶ್ವದ ಗಮನಸೆಳೆಯುವಲ್ಲಿ ಯಶಸ್ವಿಯಾಯಿತು. ಆದರೆ ತಾನೊಬ್ಬ ಮಹಿಳೆ ಎನ್ನುವುದನ್ನು ಆತ್ಮಗೌರವದೊಂದಿಗೆ ತಲೆ ಎತ್ತಿ ನಿಂತಲ್ಲಿ ಮಾತ್ರ ಮಹಿಳಾ ಸಬಲೀಕರಣ ಆಗಲು ಸಾಧ್ಯ ಎಂದರು.
ಇಂದಿನ ಯುವಸಮೂಹ ಮೊಬೈಲ್‌ನಲ್ಲಿ ರೀಲ್ಸ್ ನೋಡುವಲ್ಲೇ ಕಾಲ ಕಳೆಯುತ್ತಿದೆ. ಕಂಟೆಂಟ್‌ಗಳನ್ನು ಓದುವತ್ತ ಚಿತ್ತ ಹರಿಸುತ್ತಿಲ್ಲ. ಕ್ಷುಲ್ಲಕ ಕಾರಣಕ್ಕೆ ಜೀವ ಕಳೆದುಕೊಂಡು ಜೀವ ಹೋದ ನಂತರವೂ ಪ್ರಸಿದ್ಧಿಗೆ ಬರಬೇಕೆನ್ನುವ ಹುಂಬುತನದೊಂದಿಗೆ ಬದುಕುತ್ತಿದೆ. ಜೀವನದಲ್ಲಿ ಧೈರ್ಯ, ಬುದ್ಧಿವಂತಿಕೆ ಮತ್ತು ಪರಿಶುದ್ಧತೆಯನ್ನು ಇಟ್ಟುಕೊಂಡು ಬಾಳಿದಲ್ಲಿ ಸಾಧನೆ ಕಟ್ಟಿಟ್ಟ ಬುತ್ತಿ.ಶುದ್ಧ ಆತ್ಮಕ್ಕೆ ಯಾವುದೇ ಲಿಂಗವಿಲ್ಲ. ನಿಮ್ಮ ಮುಂದೆ ಆಯ್ಕೆಗಳ ರಾಶಿಯೇ ಇದೆ. ಅತ್ಯುತ್ತಮವಾದದ್ದನ್ನು ಆಯ್ದುಕೊಳ್ಳುವಲ್ಲಿ ಬುದ್ಧಿವಂತಿಕೆ ತೋರಬೇಕು. ಸಕಾರಾತ್ಮಕ ಚಿಂತನೆಯೊಂದಿಗೆ ಮುಂದೆ ನುಗ್ಗಿರಿ ಎಂದು ಕಿವಿಮಾತು ಹೇಳಿದರು.
ಬೆಂಗಳೂರಿನ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ಉಪನಿರ್ದೇಶಕಿ ಎಚ್.ಸಿ.ಹೇಮಾಮಾಲಿನಿ ಮಾತನಾಡಿ, ಶಿಕ್ಷಣ ನಿಮ್ಮ ಜೀವನದ ಅತಿದೊಡ್ಡ ಅಸ್ತ್ರವಾಗಲಿದೆ. ಕಾಲೇಜು ಶಿಕ್ಷಣದೊಂದಿಗೆ ಸರ್ಟಿಫಿಕೇಟ್ ಕೋರ್ಸ್‌ಗಳ ಕಡೆ ಗಮನಹರಿಸಿ. ನಿಮ್ಮಲ್ಲಿ ಕೌಶಲ ಮತ್ತು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಇಂತಹ ಕೋರ್ಸ್‌ಗಳು ಸಹಕಾರಿಯಾಗಿವೆ. ಜೀವನದಲ್ಲಿ ಬಹುಪಾತ್ರಗಳನ್ನು ವಹಿಸುವವಳು ಹೆಣ್ಣು ಮಾತ್ರ. ಶಿಕ್ಷಣ ನಿಮ್ಮಲ್ಲಿ ನೈತಿಕ ಮತ್ತು ಮಾನಸಿಕ ಸ್ಥೈರ್ಯ ತುಂಬಬಲ್ಲದು. ಸೃಜನಶೀಲತೆ ಹೆಚ್ಚಿಸಿಕೊಳ್ಳುವ, ನಾಯಕತ್ವದ ಗುಣ ರೂಢಿಸಿಕೊಳ್ಳುವ ಮತ್ತು ಕರ್ತವ್ಯಪರತೆ ಮೆರೆಯುವಲ್ಲಿ ಪುರುಷನಿಗಿಂತ ಮಹಿಳೆ ಎಂದಿಗೂ ಮುಂದಿನ ಸಾಲಿನಲ್ಲಿರುತ್ತಾಳೆ. ನಿಮ್ಮ ಏಳಿಗೆಗೆ ಶಿಕ್ಷಣ ಪಡೆಯುವುದೊಂದೇ ನಿಮಗಿರುವ ದಾರಿ ಎಂದರು.
ಪ್ರಾಂಶುಪಾಲ ಡಾ.ಬಿ.ಸಿ.ಸುರೇಶ್ ಅಧ್ಯಕ್ಷತೆವಹಿಸಿದ್ದರು. ಪತ್ರಕರ್ತ ಧರ್ಮಾಪುರ ನಾರಾಯಣ್, ಮಹಿಳಾ ಕುಂದುಕೊರತೆ ಘಟಕದ ಸಂಚಾಲಕಿ ಡಾ.ಎಚ್.ಎಲ್.ಶೋಭಾ, ವಾಣಿಜ್ಯಶಾಸ್ತ್ರ ಸಹಪ್ರಾಧ್ಯಾಪಕಿ ಕವಿತಾ ರಾಘವೇಂದ್ರ ಕಟ್ಟಿ, ಐಕ್ಯೂಎಸಿ ಸಂಚಾಲಕ ಬಸವರಾಜು, ಸಹ ಪ್ರಾಧ್ಯಾಪಕಿ ಡಾ.ಎಚ್.ಎಲ್.ದಿವ್ಯಾ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್.ರಾಶಿ, ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ವಸಂತಕುಮಾರ್ ಇದ್ದರು.