ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸ್ವಾತಿ ನಕ್ಷತ್ರ ದಿನದ ವಿಶೇಷ ಪೂಜೆ ಅಂಗವಾಗಿ ಮೈಸೂರು ಮಹಿಳಾ ಸಂಘದ ಭಜನಾ ಮಂಡಳಿ ಆಶ್ರಯದಲ್ಲಿ ನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್.ವಿ.ರಾಜೀವ್, ಎನ್.ಶ್ರೀನಿವಾಸನ್ ಇತರರು ಇದ್ದರು. 
ಮೈಸೂರು

ಮಹಿಳೆಯರು ದೇಶದ ಪ್ರಗತಿಯ ಅಡಿಪಾಯ: ಎನ್.ಶ್ರೀನಿವಾಸನ್ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಸ್ವಾತಿ ನಕ್ಷತ್ರ ದಿನದ ವಿಶೇಷ ಪೂಜೆ
  • ಮೈಸೂರು ಮಹಿಳಾ ಸಂಘದ ಭಜನಾ ಮಂಡಳಿ ಆಶ್ರಯದಲ್ಲಿ ಕಾರ್ಯಕ್ರಮ
ಮೈಸೂರು:ಮಹಿಳಾ ದಿನವು ಕೇವಲ ಒಂದು ದಿನದ ಆಚರಣೆಯಲ್ಲ, ಇದು ಮಹಿಳೆಯರ ಸಮಾನತೆ ಮತ್ತು ಗೌರವಕ್ಕಾಗಿ ಸಮಾಜ ಒಟ್ಟಾಗಿ ಕೆಲಸ ಮಾಡುವ ಸಂಕಲ್ಪದ ದಿನವಾಗಿದೆ ಎಂದು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಬಣ್ಣಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸ್ವಾತಿ ನಕ್ಷತ್ರ ದಿನದ ವಿಶೇಷ ಪೂಜೆ ಅಂಗವಾಗಿ ಮೈಸೂರು ಮಹಿಳಾ ಸಂಘದ ಭಜನಾ ಮಂಡಳಿ ಆಶ್ರಯದಲ್ಲಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ದೇಶದ ಪ್ರಗತಿಯ ಅಡಿಪಾಯ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಲಿಂಗ ತಾರತಮ್ಯ ನಿರ್ಮೂಲನೆ, ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಟ ಮತ್ತು ಸಮಾನ ಅವಕಾಶಗಳಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತವಿಶ್ವಾಸವನ್ನು ಹೆಚ್ಚಿಸಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಭಾರತದ ನಾರಿ ಶಕ್ತಿಯ ಸಾಧನೆಗಳು ಹೆಮ್ಮೆಯ ಮೂಲವಾಗಿದೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪರಿವರ್ತನಾಶೀಲ ಪಾತ್ರದ ಪ್ರಬಲ ಜ್ಞಾಪನೆಯಾಗಿದೆ ಎಂದು ಹೇಳಿದರು.
ಮಹಿಳೆಯರು ಸಶಕ್ತರಾದರೆ ಮಾತ್ರ ದೇಶ ಸಶಕ್ತವಾಗಲು ಸಾಧ್ಯ. ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ಧನ್ಯವಾದ ಹೇಳಲು ಇದು ಒಂದು ಉತ್ತಮ ಸಮಯ. ತಾಯಂದಿರು, ಸಹೋದರಿಯರು, ಪತ್ನಿಯರು, ಸಹೋದ್ಯೋಗಿಗಳು ಮತ್ತು ಸ್ನೇಹಿತರಾಗಿ, ಮಹಿಳೆಯರು ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರುತ್ತಾರೆ. ಹೀಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನವು ಅವರಿಗೆ ಧನ್ಯವಾದ ಹೇಳಲು ಉತ್ತಮ ಅವಕಾಶವಾಗಿದೆ ಎಂದು ಸಂತಸ ವ್ಯಕ್ತಡಿಸಿದರು.
ಇದೇ ವೇಳೆ ದೇವಾಯಲಕ್ಕೆ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೂ ಸಂಸ್ಥಾಪಕರಾದ ನಾಡೋಜ ಪ್ರೊ.ಡಾ.ಭಾಷ್ಯಂ ಸ್ವಾಮಿ ಅವರ ನೇತೃತ್ವದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಹಿರಿಯ ವಕೀಲ ‘ಲಾಗೈಡ್’ ಎಚ್.ಎನ್.ವೆಂಕಟೇಶ್, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.