- ಹಾಸನ ಜಿಲ್ಲೆ ಬಾಣಾವರ ಮೂಲದ ನಿವಾಸಿ ಶಾಂತಮ್ಮ ಅವರಿಗೆ ಪುನರ್ವಸತಿ
- ಮುತುವರ್ಜಿ ವಹಿಸಿದ ಅಧಿಕಾರಿಗಳಿಗೆ 10 ಸಾವಿರ ರೂ. ನಗದು ಬಹುಮಾನ
ಮೈಸೂರು: ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾದರೂ ಸಂಬಂಧಿಕರು ಇಲ್ಲದ ಮಹಿಳೆಗೆ ಪುನರ್ವಸತಿ ಕೇಂದ್ರದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಹಾಸನ ಜಿಲ್ಲೆ ಬಾಣಾವರ ಮೂಲದ ನಿವಾಸಿ ಶಾಂತಮ್ಮ ಅವರಿಗೆ ಪುನರ್ವಸತಿ ದೊರಕಿಸಲಾಗಿದೆ.
ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಶಾಂತಮ್ಮ ಅಪರಾಧಿಯಾಗಿದ್ದರು. ಹಾಸನದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2016ರಲ್ಲಿ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಿತ್ತು.
ಮೈಸೂರು ಕಾರಾಗೃಹದಲ್ಲಿದ್ದ ಶಾಂತಮ್ಮ ಅವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಲು ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ, ಬಿಡುಗಡೆ ಮಾಡುವ ಸಂದರ್ಭದಲ್ಲಿ ರಕ್ತ ಸಂಬಂಧಿಕರು, ಸ್ನೇಹಿತರು ಬಂದಿರಲಿಲ್ಲ.
ಬಾಣಾವರ ಪೊಲೀಸ್ ಠಾಣಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ಸಂಪರ್ಕಿಸಿದಾಗ ಮನೆಯವರು ಹಾಗೂ ರಕ್ತ ಸಂಬಂಧಿಕರು ಯಾರೂ ಇಲ್ಲ ಎಂಬುದು ಗೊತ್ತಾಗಿತ್ತು. ಹೀಗಾಗಿ ಜೈಲಿನ ಮಹಿಳಾ ಅಧಿಕಾರಿ, ಸಿಬ್ಬಂದಿ ಬೆಂಗಾವಲಿನಲ್ಲಿ ಹಾಸನದ ಶಕ್ತಿ ಸದನ ಕೇಂದ್ರಕ್ಕೆ ದಾಖಲಿಸಿದ್ದಾರೆ. ಹಾಸನ ಜೈಲಿನ ಅಧಿಕಾರಿಗಳೂ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಮುತುವರ್ಜಿ ವಹಿಸಿದ ಅಧಿಕಾರಿಗಳಿಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ವಿಭಾಗದ ಡಿಜಿ ಅಲೋಕ್ ಕುಮಾರ್ ಅವರು 10 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.