ಮೈಸೂರು: ನಗರದ ಮಹಿಳೆಯೊಬ್ಬರು ಇನ್ಸೂರೆನ್ಸ್ ಕಂಪನಿಯೊಂದಕ್ಕೆ ಹೆಚ್ಚುವರಿಯಾಗಿ ಪಾವತಿಸಿದ 60 ಸಾವಿರ ರೂ. ಪಡೆಯಲು ಹೋಗಿ ವಂಚಕರ ಜಾಲದೊಳಗೆ ಸಿಲುಕಿ ಬರೋಬ್ಬರಿ 20.73 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಗೋಕುಲಂ ನಿವಾಸಿ ಲಲಿತಾ ಕೃಷ್ಣದಾಸ್ ಎಂಬವರೇ ಹಣ ಕಳೆದುಕೊಂಡವರು. ಇವರು ಇನ್ಸೂರೆನ್ಸ್ ಕಂಪನಿಯೊಂದಕ್ಕೆ ಹೆಚ್ಚುವರಿಯಾಗಿ 60 ಸಾವಿರ ರೂ.ಪಾವತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆ ಕಂಪನಿಯ ಕಸ್ಟಮರ್‌ಕೇರ್‌ಗೆ ಕರೆ ಮಾಡಲು ಗೂಗಲ್‌ನಲ್ಲಿ ನಂಬರ್‌ಗೆ ಸರ್ಚ್ ಮಾಡಿದ್ದಾರೆ.
ಈ ಸಂದರ್ಭ ಇನ್ಸೂರೆನ್ಸ್ ಕಂಪನಿಯ ಹೆಸರು ಹೇಳಿಕೊಂಡು ವಂಚಕನೊಬ್ಬ ಲಲಿತಾ ಅವರಿಗೆ ಕರೆ ಮಾಡಿ ಕಂಪನಿಯಿಂದ ಆಗಿರುವ ಸಮಸ್ಯೆಯ ಕುರಿತು ಪತ್ರದ ಮೂಲಕ ತಿಳಿಸುವಂತೆ ಕೋರಿದ. ವಂಚಕನ ಮಾತು ನಂಬಿದ ಲಲಿತಾ ಅವರು ಪತ್ರ ಬರೆದು ವಂಚಕನ ನಂಬರ್‌ಗೆ ವಾಟ್ಸ್‌ಆ್ಯಪ್ ಮಾಡಿದರು. ನಂತರ 60 ಸಾವಿರ ರೂ. ಹಣ ವಾಪಾಸ್ ಪಡೆಯಲು 20 ಸಾವಿರ ರೂ. ಪಾವತಿಸುವಂತೆ ಸೂಚಿಸಿದ. ನಂತರ ವಿವಿಧ ಹಂತಗಳಲ್ಲಿ ವಿವಿಧ ಕಾರಣಗಳನ್ನು ನೀಡಿ ಹಣ ಪಾವತಿಸುವಂತೆ ವಂಚಕ ಹೇಳಿದ ರೀತಿಯಲ್ಲಿಯೇ ಇವರು ಒಟ್ಟು 20,07,561 ರೂ. ಪಾವತಿಸಿದ್ದಾರೆ. ಆದರೆ, ನಂತರ ಹಣ ಬಾರದೆ ಇದ್ದಾಗ ವಂಚನೆ ನಡೆದಿರುವುದು ತಿಳಿದು ಬಂತು. ಈ ಕುರಿತು ಲಲಿತಾ ಕೃಷ್ಣದಾಸ್ ಬುಧವಾರ ನೀಡಿದ ದೂರಿನ ಮೇರೆಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.