crime 
ಮೈಸೂರು

ಖಾಸಗಿ ಬಸ್ ಡಿಕ್ಕಿಯಿಂದ ಮಹಿಳೆ ಸಾವು

ನಗರದ ಕೆ.ಆರ್.ವೃತ್ತದಲ್ಲಿ ಬುಧವಾರ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಂಬಂಧಿಕರ ಮನೆಯ ತಿಥಿ ಕಾರ್ಯಕ್ಕೆ ಹೋಗುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ.
ಇಲವಾಲದ ಬಾಲಗಂಗಾಧರನಾಥ ಸ್ವಾಮಿ ಬಡಾವಣೆ ನಿವಾಸಿ ಎಂ.ಮಹಾಲಕ್ಷ್ಮೀ(39) ಮೃತರು.
ಬೆಳವಾಡಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಮಹಾಲಕ್ಷ್ಮೀ ಅವರು ತಮ್ಮ ತಾಯಿ ಗೀತಾ ಅವರೊಂದಿಗೆ ನಗರ ಬಸ್ ನಿಲ್ದಾಣಕ್ಕೆ ಬಂದಿದ್ದು, ಬೆಳಗ್ಗೆ 7.30ರ ಸುಮಾರಿಗೆ ಕೆ.ಆರ್.ಸರ್ಕಲ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಚಾಮರಾಜ ಒಡೆಯರ್ ವೃತ್ತದ ಕಡೆಯಿಂದ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಜತೆಯಲ್ಲಿದ್ದ ತಾಯಿ ಗೀತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಾಲಕ್ಷ್ಮೀ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರೂ ಗಂಭೀರವಾಗಿ ಗಾಯಗೊಂಡ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.