ಸೈಬರ್ ಕ್ರೈಮ್ 
ಮೈಸೂರು

ಹಣ ಸಂಪಾದಿಸಬಹುದು ಎಂದು ನಂಬಿಸಿ ಮೋಸ; ಮಹಿಳೆಗೆ 2.74 ಲಕ್ಷ ರೂ.ವಂಚನೆ

ಪ್ರಮುಖ ಮುಖ್ಯಾಂಶಗಳು

  • ಹಂತ ಹಂತವಾಗಿ 1.74 ಲಕ್ಷ ರೂ. ಪಾವತಿಸಿದ ಮಹಿಳೆ
  • ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮೈಸೂರು: ಆನ್‌ಲೈನ್ ಮೂಲಕ ಮಾರಾಟವಾಗುವ ಉತ್ಪನ್ನಗಳಿಗೆ ರೇಟಿಂಗ್ಸ್ ನೀಡಿ, ಅಧಿಕ ಹಣ ಸಂಪಾದಿಸಬಹುದು ಎಂದು ನಂಬಿಸಿ, ಮಹಿಳೆಯೊಬ್ಬರಿಗೆ 2.74 ಲಕ್ಷ ರೂ. ವಂಚಿಸಲಾಗಿದೆ.
ಶಾರದಾದೇವಿನಗರದ ಮಹಿಳೆ, ಮನೆಯಿಂದಲೇ ಕೆಲಸ ಮಾಡಿ ಹಣಗಳಿಸುವ ಆನ್‌ಲೈನ್ ಅಸಿಸ್ಟೆಂಟ್ ಕೆಲಸದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತು ನೋಡಿದ್ದಾರೆ.
ಕುತೂಹಲದಿಂದ ಅದರ ಮೇಲಿದ್ದ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಅವರ ವಾಟ್ಸ್‌ಆ್ಯಪ್ ನಂಬರ್‌ಗೆ ಅಂಜಲಿ ಪೂಜಾ ಹೆಸರಿನಲ್ಲಿ ಸಂದೇಶ ಬಂದಿದೆ. ತಾನು ಫ್ಲಿಪ್‌ಕಾರ್ಟ್‌ನಲ್ಲಿ ಎಚ್‌ಆರ್ ಆಗಿದ್ದು, ನೀವು ದಿನಕ್ಕೆ 1ರಿಂದ 3 ಗಂಟೆ ಕೆಲಸ ಮಾಡಿದರೆ 10ರಿಂದ 20 ಸಾವಿರ ರೂ. ಸಂಪಾದಿಸಬಹುದು ಎಂದು ಆಸೆ ಹುಟ್ಟಿಸಿದ್ದಾರೆ.
ಆನ್‌ಲೈನ್ ಮರ್ಚೆಂಟ್ಸ್‌ಗೆ ಅವರ ಉತ್ಪನ್ನಗಳ ರೇಟಿಂಗ್ಸ್ ಹೆಚ್ಚಿಸಿಕೊಳ್ಳಲು ಸಹಾಯ ಮಾಡಿದರೆ ಒಳ್ಳೆಯ ಕಮಿಷನ್ ನೀಡುತ್ತೇವೆ ಎಂದು ಆನ್‌ಲೈನ್ ಅಸಿಸ್ಟೆಂಟ್ ಕೆಲಸಕ್ಕೆ ನೋಂದಾಯಿಸಿಕೊಂಡಿದ್ದಾರೆ.
ಕ್ಯೂಆರ್ ಕೋಡ್ ಮೂಲಕ ಆರಂಭದಲ್ಲಿ ಸಾವಿರ ರೂ. ಸಂದಾಯ ಮಾಡಿಸಿಕೊಂಡು, ರೇಟಿಂಗ್ಸ್ ನೀಡುವ ಕೆಲಸ ನೀಡಿದ್ದಾರೆ.
ಹೀಗೆ ಹಂತ ಹಂತವಾಗಿ 1.74 ಲಕ್ಷ ರೂ. ಪಾವತಿಸಿದ ಮಹಿಳೆ, ರೇಟಿಂಗ್ಸ್ ಟಾಸ್ಕ್ ಪೂರೈಸಿದ ಬಳಿಕ ಕಮಿಷನ್ ಹಣ ಕೇಳಿದ್ದಾರೆ. ಆಗ ಹ್ಯಾಂಡ್ಲಿಂಗ್ ಫೀ, ಇನ್‌ಕಮ್ ಟ್ಯಾಕ್ಸ್, ಲಾಂಡರಿಂಗ್ ಫೀ ಪಾವತಿಸಬೇಕೆಂದು ತಿಳಿಸಿ, 2.74 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.