ಪಿರಿಯಾಪಟ್ಟಣದಲ್ಲಿ ಜರುಗಿದ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮುಖಂಡರು ಕರಪತ್ರ ಬಿಡುಗಡೆ ಮಾಡಿದರು. ಮಾಜಿ ಶಾಸಕ ಕೆ.ಮಹದೇವ್, ಜಿ.ಪಿ.ಅಶ್ವಿನ್ ಕುಮಾರ್, ಅಣ್ಣಯ್ಯ ಶೆಟ್ಟಿ, ಎಚ್.ಡಿ.ರಾಜೇಂದ್ರ, ಮಂಜುನಾಥ್ ಸಿಂಗ್, ನಿರಂಜನ್, ಪಿ.ಸಿ.ಕೃಷ್ಣ, ಕೆ.ರಮೇಶ್, ಗಗನ್ ಇತರರು ಇದ್ದರು.
- ವಿಶೇಷ ಸಮಗ್ರ ಪರಿಷ್ಕರಣೆ, ಬಿಎಲ್‌ಎ-2 ಪದಾಧಿಕಾರಿಗಳ ಕಾರ್ಯಾಗಾರ
ಪಿರಿಯಾಪಟ್ಟಣ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವುದಕ್ಕೆ ಕಾರ್ಯಕರ್ತರು ವೀರ ಸೇನಾನಿಗಳಾಗಿ ಹೋರಾಡಬೇಕು ಎಂದು ಮಾಜಿ ಶಾಸಕ ಕೆ.ಮಹದೇವ್ ಕರೆನೀಡಿದರು.
ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಸಮಗ್ರ ಪರಿಷ್ಕರಣೆ, ಪದಾಧಿಕಾರಿಗಳ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತಾಲೂಕಿನಲ್ಲಿ ಪಕ್ಷ ಸಂಘಟನೆಗಾಗಿ 34 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಕೋರ್ ಕಮಿಟಿ ಮತ್ತು ಬೂತ್ ಮಟ್ಟದ ಕಮಿಟಿಗಳನ್ನು ರಚನೆ ಮಾಡಿದ್ದೇನೆ. ತಲಾ 15 ಸದಸ್ಯರನ್ನು ಒಳಗೊಂಡ ಈ ಸಮಿತಿಯಲ್ಲಿ ಪ್ರತಿ ಸಮುದಾಯಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಇಂದು ಪಕ್ಷದ ಸಂಘಟನೆ ಅನಿವಾರ್ಯವಾಗಿದ್ದು ಜನಸಾಮಾನ್ಯರಿಗೆ ತಾಲೂಕು ಆಡಳಿತದಿಂದ ಸಾಕಷ್ಟು ಅನ್ಯಾಯವಾಗುತ್ತಿದೆ. ರಾಗಿ ಖರೀದಿ ಕೇಂದ್ರಗಳಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಇದಕ್ಕೆ ಶಾಸಕ ಮತ್ತು ಅವರ ಪುತ್ರ ಬೆಂಬಲ ನೀಡುತ್ತಿದ್ದಾರೆ. ಪಿರಿಯಾಪಟ್ಟಣ ಎಪಿಎಂಸಿಯ ರಾಗಿ ಖರೀದಿ ಕೇಂದ್ರಗಳಲ್ಲಿ ಚೀಲವೊಂದಕ್ಕೆ 5 ಕೆ.ಜಿ. ಕಳೆಯುತ್ತಿದ್ದಾರೆ, ಲೋಡ್ ಮಾಡುವವರಿಗೆ ಸರ್ಕಾರದಿಂದ ಹಣ ನೀಡುತ್ತಿದ್ದರೂ ರೈತರಿಂದ 3000 ರೂ. ವಸೂಲು ಮಾಡುತ್ತಿದ್ದು ಗುಣಮಟ್ಟ ಪರೀಕ್ಷೆ ಮಾಡುವವನಿಗೆ 2000 ರೂ. ಹಾಗೂ ರಾಗಿ ಕೊಳ್ಳಲು ಖರೀದಿ ಅಧಿಕಾರಿಗಳು 6000 ರೂ. ಲಂಚ ವಸೂಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಆದರೆ ಲಂಚದ ಹಣವನ್ನು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿ ನುಂಗಲು ಪ್ರಾರಂಭಿಸಿದರೆ ಬಡ ರೈತರ ಪಾಡೇನು?. ಆದ್ದರಿಂದ ಕಾರ್ಯಕರ್ತರು ತಳಮಟ್ಟದಿಂದ ಪಕ್ಷ ಸಂಘಟನೆಗೆ ಸಿದ್ದರಾಗಬೇಕು ಎಂದರು.
ಪಕ್ಷದ ರಾಜ್ಯ ವಕ್ತಾರ ಜಿ.ಪಿ.ಅಶ್ವಿನ್‌ಕುಮಾರ್ ಮಾತನಾಡಿ, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ರಾಜ್ಯ ಸಮಿತಿಯು ನಿಖಿಲ್ ಕುಮಾರಸ್ವಾಮಿನೇತೃತ್ವದಲ್ಲಿ ಕೆಲವೊಂದು ನಿಯಮ ಮತ್ತು ಸಿದ್ಧಾಂತಗಳನ್ನು ಮಾಡಿ ಬಿಎಲ್‌ಎ ಪದಾಧಿಕಾರಿಗಳನ್ನು ನೇಮಕಗೊಳಿಸಿ ಅವರಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಇವರು ಜವಾಬ್ದಾರಿಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿ ಪಕ್ಷದ ಶ್ರೇಯಸ್ಸಿಗೆ ದುಡಿಯಬೇಕು ಎಂದರು.
ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮೈಮುಲ್ ಮಾಜಿ ನಿರ್ದೇಶಕ ಎಚ್.ಡಿ.ರಾಜೇಂದ್ರ, ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ್ ಸಿಂಗ್, ಮಾಜಿ ಸದಸ್ಯರಾದ ನಿರಂಜನ್, ಪಿ.ಸಿ.ಕೃಷ್ಣ, ಮುಖಂಡರಾದ ಕೆ.ರಮೇಶ್, ಗಗನ್, ರಾಜೇಗೌಡ, ರೇಣುಕಾ ಸ್ವಾಮಿ, ಎಂ.ಜೆ.ಸ್ವಾಮಿ. ಸುನೀಲ್, ಧನಂಜಯ, ದಿನೇಶ್, ಪಿ.ಕೆ.ಕುಮಾರ್, ಅಶೋಕ್ ಪುನಾಡಳ್ಳಿ, ಚಂದ್ರು, ಜೆ.ಎಸ್.ನಾಗರಾಜ್, ಗಣೇಶ್, ಕುಬೇರ, ರಾಜೇಗೌಡ, ಸ್ವಾಮಿ, ರಂಗನಾಥ್ ಸೇರಿದಂತೆ ಇತರರಿದ್ದರು.