ಜನಪರ ಸಾಹಿತ್ಯ ಪರಿಷತ್ ವತಿಯಿಂದ ನಟ ಮುಖ್ಯಮಂತ್ರಿ ಚಂದ್ರು ಹಾಗೂ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ಶ್ರೀಕೃಷ್ಣ ಆಲನಹಳ್ಳಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು: ಈಚಿನ ಕನ್ನಡ ಸಿನಿಮಾಗಳ ಶೀರ್ಷಿಕೆಗಳು ಕನ್ನಡದಲ್ಲಿ ಇರುವುದಿಲ್ಲ. ಇಂಥ ಕನ್ನಡ ವಿರೋಧಿಗಳಿಗೆ ಯಾಕೆ ಪ್ರೋತ್ಸಾಹ ನೀಡಬೇಕು ಎಂದು ರಂಗಭೂಮಿ, ಸಿನಿಮಾ ನಟ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.
ಮೆಸೂರು- ಗದ್ದಿಗೆ ರಸ್ತೆಯ ಆಲನಹಳ್ಳಿಯಲ್ಲಿ ಗುರುವಾರ ಜನಪರ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಮನೆಮನೆ ಕವಿಗೋಷ್ಠಿ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರೊಂದಿಗೆ ಶ್ರೀಕೃಷ್ಣ ಆಲನಹಳ್ಳಿ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಡೆವಿಲ್, ಮಾರ್ಕ್, 45 ಈ ರೀತಿ ಕನ್ನಡದ ಸಿನಿಮಾಗಳ ಹೆಸರುಗಳು ಆಂಗ್ಲಮಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಟರು ಕನ್ನಡ ನಾಡು-ನುಡಿಗೆ ಹೋರಾಡಲಿ. ಕನ್ನಡದಲ್ಲಿ ನಾಮಫಲಕಗಳಿರುವ ಹಾಗೆ ನೋಡಿಕೊಳ್ಳಿ. ಜನರ ಪ್ರೀತಿ, ವಿಶ್ವಾಸ ಗಳಿಸಿಕೊಳ್ಳಿ. ಇದಕ್ಕಾಗಿ ವರನಟ ಡಾ.ರಾಜಕುಮಾರ್ ಅವರನ್ನು ಮಾದರಿಯಾಗಿಟ್ಟುಕೊಳ್ಳಿ. ನಡವಳಿಕೆ ಮುಖ್ಯ, ಹಣಗಳಿಕೆ ಮುಖ್ಯವಲ್ಲ ಎಂದು ಅರಿಯಿರಿ. ಸ್ನೇಹ, ಸೌಹಾರ್ದದಿಂದ ಎಲ್ಲರೊಂದಿಗೆ ನಟರು ಇರಬೇಕು. ಹಾಗೆಯೇ ಸ್ಪರ್ಧೆಗಿಳಿದಂತೆ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಬೇಡಿ. ಆಗ ಕನ್ನಡ ಸಿನಿಮಾಗಳು ಹೆಚ್ಚು ದಿನಗಳು ಓಡುತ್ತವೆ ಎಂದು ಅವರು ಸಲಹೆ ನೀಡಿದರು.
ಕನ್ನಡ ಸಿನಿಮಾ ರಂಗ ಚಿಕ್ಕದು. ಹೀಗಿರುವಾಗ ಎಲ್ಲ ಸಿನಿಮಾಗಳು ಓಡಬೇಕು. ಆದರೆ ಕನ್ನಡ ಸಿನಿಮಾಗಳ ಪೈಪೋಟಿಯಿಂದ ಕನ್ನಡ ಚಿತ್ರರಂಗ ಸೊರಗುತ್ತದೆ. ಬೇರೆ ಭಾಷೆಯ ಸಿನಿಮಾಗಳ ಕುರಿತು ಎಚ್ಚರದಿಂದ ಇರಬೇಕು. ಇಂಥದರಲ್ಲಿ ಯುದ್ಧಕ್ಕೆ ಸಿದ್ಧವೆನ್ನುವ ನಟ ಸುದೀಪ್ ಅವರು ನೇರವಾಗಿ ಪೈರಸಿ ವಿರುದ್ಧ ಯದ್ಧ ಎನ್ನಬೇಕಿತ್ತು ಎಂದು ಕಿವಿಮಾತು ಹೇಳಿದರು.