ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ನಂಜನಗೂಡಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕಮಲಾಕ್ಷ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಶ್ರುತಿಶ್ರೀ, ಎ.ಎಂ.ಸರಿತಾಕುಮಾರಿ, ಕೃತಿಕಾ ಪವಾರ್, ಮಹದೇವಸ್ವಾಮಿ, ಎಂ.ಕೆ.ಬಸವಣ್ಣ, ಕೆಂಪರಾಜು, ಚಿನ್ನಸ್ವಾಮಿ ಇತರರಿದ್ದರು.
ನಂಜನಗೂಡು: ಬದುಕು ಸಾಗಿಸಲು ಆಹಾರ, ಗಾಳಿ, ನೀರು, ಬೆಳಕು ಸಾಕು. ಆದರೆ ತಂಬಾಕು ಸೇವೆನೆ ಯಾಕೆ ಬೇಕು? ಸಾರ್ವಜನಿಕರು ತಂಬಾಕು ಸೇವನೆ ಚಟಕ್ಕೆ ಏಕೆ ದಾಸರಾಗುತ್ತಾರೆ ಎಂಬುದು ಇದುವರೆಗೂ ನನಗೆ ತಿಳಿಯದ ಯಕ್ಷ ಪ್ರಶ್ನೆಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕಮಲಾಕ್ಷ ತಿಳಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ವಕೀಲರ ಸಂಘದ ಜಂಟಿ ಸಹಯೋಗದೊಂದಿಗೆ ಪ್ರಾಧಿಕಾರದ ಕ್ರಿಯಾ ಯೋಜನೆಯಡಿಯಲ್ಲಿ ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಂಬಾಕು ಬಳಕಯಿಂದ ಅಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಅಂಕಿ ಅಂಶಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆಯಿಂದ 30 ರಿಂದ 40 ವಯೋಮಾನದವರು ಹೆಚ್ಚಾಗಿ ಮೃತಪಡುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಜನರಲ್ಲಿ ತಂಬಾಕು ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಕ್ಯಾನ್ಸರ್, ಹೃದಯ, ಮೂತ್ರಪಿಂಡ ಇಂತಹ ಅಂಗಾಂಗಗಳಿಗೆ ಹಾನಿ ಮಾಡುವಲ್ಲಿ ತಂಬಾಕು ಶೇಕಡ 90ರಷ್ಟು ಯಶಸ್ವಿಯಾಗಿದೆ. ತಂಬಾಕು ಸೇವನೆಯಿಂದಲೇ ಮನುಷ್ಯನ ದೇಹದ ಹಲವು ಅಂಗಗಳು ವೈಫಲ್ಯಗೊಳ್ಳುತ್ತವೆ. ನನ್ನನ್ನು ಒಳಗೊಂಡಂತೆ ನ್ಯಾಯಾಲಯದ ಆವರಣದಲ್ಲಿ ಯಾರೂ ಧೂಮಪಾನ ಸೇವನೆ ತಂಬಾಕು ಸೇವನೆ ಮಾಡುವುದಿಲ್ಲ. ಆದರೂ ಸಹ ಕೆಲವರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಕಾರಣ ಧೂಮಪಾನ ಮಾಡುವವನ ಬಳಿ ನಾವು ಹಲವು ಬಾರಿ ಸುಳಿದಾಡಿದರೆ ಅವನು ಬಿಡುವ ಹೊಗೆ ನಮ್ಮ ದೇಹದೊಳಗೆ ಸೇರಿ ನಮಗೂ ಕ್ಯಾನ್ಸರ್‌ನಂತಹ ಮಹಾಮಾರಿ ಬರುವ ಸಾಧ್ಯತೆಗಳಿವೆ. ಆದ್ದರಿಂದಲೇ ಸರ್ಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿದೆ ಎಂದರು.
ಟಿಎಚ್‌ಒ ಈಶ್ವರ್ ಕನ್ಬಾಟಿ ಮಾತನಾಡಿದರು.ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಸ್.ಶ್ರುತಿಶ್ರೀ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎ.ಎಂ.ಸರಿತಾಕುಮಾರಿ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕೃತಿಕಾ ಪವಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಕೆ.ಬಸವಣ್ಣ, ಉಪಾಧ್ಯಕ್ಷ ಕೆಂಪರಾಜು, ಸರ್ಕಾರಿ ಅಭಿಯೋಜಕ ಚಿನ್ನಸ್ವಾಮಿ, ಡಾ.ಅನಿತಾ ಸಜ್ಜನ್‌ರಾವ್, ನ್ಯಾಯಾಲಯದ ಸಿಬ್ಬಂದಿ ಇದ್ದರು.