ಮಾಜಿ ಸಚಿವ ಸಾ.ರಾ. ಮಹೇಶ್  
ಮೈಸೂರು

"ಎಸ್‌ಐಆರ್' ಕಾಂಗ್ರೆಸ್‌ಗೆ ಏಕೆ ಆತಂಕ? : ಸಾ.ರಾ.ಮಹೇಶ್ ಪ್ರಶ್ನೆ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿಕೆ
  • ಜೆಡಿಎಸ್‌ಗಿಂತ ‘ಕೈ’ ಪಕ್ಷದಲ್ಲಿ ಅತಿ ಹೆಚ್ಚು ಭ್ರಷ್ಟರು
ಮೈಸೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಕಾಂಗ್ರೆಸ್‌ಗೆ ಏಕೆ ಆತಂಕ? ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಪ್ರಶ್ನಿಸಿದರು.
ಇವರ ನಡೆಯಿಂದಾಗಿ 2023ರ ವಿಧಾನಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದಿರುವ ಕುರಿತು ಅನುಮಾನ ಇದೀಗ ಮೂಡುವಂತಾಗಿದೆ. ಪಾರದರ್ಶಕವಾಗಿ ಈ ಎಲೆಕ್ಷನ್ ನಡೆದಿದೆಯೇ? ಕೃಷ್ಣರಾಜ ಕ್ಷೇತ್ರದಲ್ಲಿ 18,800 ಮತದಾರರ ವಿಳಾಸವೇ ಸಿಗುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಮತದಾನ ಪಟ್ಟಿ ಪರಿಷ್ಕರಣೆ ಮಾಡುವವರು ರಾಜ್ಯ ಸರ್ಕಾರದ ಅಧೀನದ ಅಧಿಕಾರಿಗಳೇ. ಇವರ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ನಂಬಿಕೆ ಇಲ್ಲವೇ? ಎಂದೂ ಪ್ರಶ್ನಿಸಿದರು. 
ಎರಡು ಕಡೆ ಹೆಸರು ಸೇರ್ಪಡೆ, ಸಾವು, ವಲಸೆ ಇನ್ನಿತರ ಕಾರಣವನ್ನು ನೋಡಿ ಈ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ಇಷ್ಟಕ್ಕೆ ಏಕೆ ಕಾಂಗ್ರೆಸ್‌ಗೆ ಗಾಬರಿ ಆಗುತ್ತಿದೆ? ಅರ್ಹ ಮತದಾರರು ಮತಪಟ್ಟಿಯಿಂದ ಕೈ ತಪ್ಪಿ ಹೋದರೆ ಮರಳಿ ಮತ್ತೆ ಸೇರಿಸುವ ಅವಕಾಶ ಇದೆ. ಆದಾಗ್ಯೂ, ಕಾಂಗ್ರೆಸ್ ಆತಂಕಕ್ಕೆ ಕಾರಣವೇನು ಎಂದು ಕುಟುಕಿದರು.
ಎಚ್.ಡಿ.ಕುಮಾರಸ್ವಾಮಿ ಆದಾಯದ ಕುರಿತು ‘ಇವರೇನು ಆಲುಗೆಡ್ಡೆ ಬೆಳೆದು ಸಂಪಾದಿಸಿದ್ದಾರೆಯೇ?’ ಎಂದು ಕೇಳಿದ್ದಾರೆ. ಕುಮಾರಸ್ವಾಮಿ ರಾಜಕೀಯಕ್ಕೆ ಬರುವ ಮುನ್ನಾ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಹಾಗಾದರೆ ಕಾಂಗ್ರೆಸ್ ನಾಯಕರೇನು ರಾಗಿ, ಭತ್ತ ಬೆಳೆದು ಸಂಪಾದಿಸಿರುವ ಹಣದಲ್ಲಿ ಆಸ್ತಿ ಮಾಡಿದ್ರಾ? ಕಾಂಗ್ರೆಸ್‌ನವರು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಮೊದಲು ಬಿಡಬೇಕು ಎಂದು ಹರಿಹಾಯ್ದರು.
ರಾಜಕಾರಣದಲ್ಲಿ ಯಾರು ಕೂಡ ಪ್ರಾಮಾಣಿಕರಿಲ್ಲ. ಈ ಕುರಿತು ಮನಸಾಕ್ಷಿಯನ್ನು ಕೇಳಿಕೊಳ್ಳಿ. ರಾಜಕಾರಣಿಗಳ ಪ್ರಾಮಾಣಿಕತೆಯ ಪ್ರಮಾಣವು ಶೇ.10, 40, 80, 90ರಷ್ಟು ಇರಬಹುದು. ಆದರೆ, ಯಾರೂ ಶುದ್ಧ ಹಸ್ತರಲ್ಲ. ನಾವೆಲ್ಲರೂ ಗಾಜಿನ ಮನೆಯಲ್ಲಿ ಇದ್ದೇವೆ. ಎಲ್ಲರೂ ಸತ್ಯ ಒಪ್ಪಿಕೊಳ್ಳಬೇಕು. ಜೆಡಿಎಸ್‌ಗಿಂತ ಅತಿ ಹೆಚ್ಚು ಭ್ರಷ್ಟರು ಕಾಂಗ್ರೆಸ್‌ನಲ್ಲಿ ಇದ್ದಾರೆ. ರಾಜ್ಯದ ಜನರಿಗೂ ಎಲ್ಲ ಗೊತ್ತಿದೆ ಎಂದರು. 
ಈ ವರೆಗೆ ಗಳಿಸಿದ ಆಸ್ತಿ, ಚುನಾವಣೆಗಳಿಗೆ ಖರ್ಚು ಮಾಡಿದ ಹಣ ಕುರಿತು ಜನರಿಗೆ ತಿಳಿಸಿದರೆ, ಅಂತಹ ಕಾಂಗ್ರೆಸ್ ನಾಯಕರನ್ನು ಜೆಡಿಎಸ್ ವತಿಯಿಂದ ಸನ್ಮಾನಿಸಲಾಗುವುದು ಎಂದರು. 
ಇಡೀ ರಾಜ್ಯದ ಇತಿಹಾಸದಲ್ಲಿ ಬಹಳಷ್ಟು ರಾಜಕಾರಣಿಗಳು ಭೂ ಒತ್ತುವರಿ ಮಾಡಿರುವ ಪ್ರಕರಣಗಳು ಮೇಲಿಂದ ಮೇಲೆ ಬೆಳಕಿಗೆ ಬರುತ್ತಿವೆ. ಯಾವುದಾದರೊಂದು ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ಕೊಟ್ಟಿಲ್ಲ. ಆದರೆ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದಂತಹ ಕೇತಗಾನಹಳ್ಳಿಯ ಭೂ ಪ್ರಕರಣವನ್ನು ಮಾತ್ರ ಎಸ್‌ಐಟಿಗೆ ವಹಿಸಲಾಗಿದೆ. ಇದು ದ್ವೇಷದ ರಾಜಕಾರಣ ಎಂದು ಕಿಡಿಕಾರಿದರು.
ಯಾರ ಬಗ್ಗೆಯಾಗಲಿ ಮಾತನಾಡುವಾಗ ಏಕ ವಚನದಲ್ಲಿ ಮಾತನಾಡಬಾರದು. ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಮಾತನಾಡ್ತಿದ್ದಾರೆ. ನಿಖಿಲ್ ಮಂಡ್ಯದಲ್ಲಿ ಐದುವರೆ ಲಕ್ಷ ಮತ ಪಡೆದಿದ್ದಾರೆ. ಅಷ್ಟೊಂದು ಮತವನ್ನು ಕಾಂಗ್ರೆಸ್‌ನ ಯಾವುದೇ ನಾಯಕ ಪಡೆದಿಲ್ಲ ಎಂದು ಹರಿಹಾಯ್ದರು.
ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ಭೇಟಿ ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಕಾಂಗ್ರೆಸ್‌ಗೆ ಕರ್ನಾಟಕ ಮಾತ್ರ ಸೋರ್ಸ್ ಆಗಿದೆ. ನಾಯಕತ್ವ ಬದಲಾವಣೆಗೆ ಹೋಗಿದ್ದಾರೆಯೇ ಅಥವಾ ನವೀಕರಣ ಮಾಡಲು ಹೋಗಿದ್ದಾರೆಯೇ ಗೊತ್ತಿಲ್ಲ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಲಕ್ಷ್ಮಣ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: 
ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಅವರ ಕುರಿತು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಾಯಿಗೆ ಬಂದಂತೆ ಮಾತನಾಡಿರುವುದು ಸರಿಯಲ್ಲ. ಅವರು ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಲಿ ಎಂದು ಗುಡುಗಿದರು.
 ನಿಖಿಲ್ ಅವರ ಸ್ಟೇಟಸ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಲಕ್ಷ್ಮಣ್ ಕೂಡ ಎಷ್ಟು ಬಾರಿ ಚುನಾವಣೆಯಲ್ಲಿ ಸೋತಿದ್ದಾರೆಂದು ಮನವರಿಕೆ ಮಾಡಿಕೊಳ್ಳಲಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಎಸ್‌ಐಆರ್ ಮ್ಯಾಪಿಂಗ್ ಕಾರ್ಯ ಪ್ರಗತಿಯಲ್ಲಿದೆ. ಈ ಬಗ್ಗೆ ಜೆಡಿಎಸ್ ಪಕ್ಷದ ವತಿಯಿಂದ ನಿಗಾ ವಹಿಸಲಾಗುತ್ತಿದೆ ಎಂದೂ ತಿಳಿಸಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿಕೆಯನ್ನು ಎಂಎಲ್‌ಸಿಗಳಾದ ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ ಸಹ ಖಂಡಿಸಿದರು.