ಬೋಗಾದಿ ರಸ್ತೆಯ ಕುಕ್ಕರಹಳ್ಳಿ ಬಳಿ ನಡೆದಿರುವ ವೈಟ್‌ಟಾಪಿಂಗ್ ಕೆಲಸ
- ರಸ್ತೆ ಅಧ್ವಾನ ಸಮಸ್ಯೆಗೆ ಶಾಶ್ವತ ಮುಕ್ತಿ
- ದೀರ್ಘಕಾಲ ಬಾಳಿಕೆ ಬರುವ ರಸ್ತೆಗಳು
- ಬಿರುಸಿನಿಂದ ಸಾಗಿದ ಕಾಮಗಾರಿ
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಗುಂಡಿ ಬೀಳುವ ಸಮಸ್ಯೆಗೆ ಶಾಶ್ವತ ಪರಿಹಾರದೊಂದಿಗೆ ರಸ್ತೆಗಳು ದೀರ್ಘಕಾಲ ಬಾಳಿಕೆ ಬರುವ ಸಲುವಾಗಿ ನಗರದಲ್ಲಿ ಕೈಗೊಂಡಿರುವ ವೈಟ್‌ಟಾಪಿಂಗ್ ಕಾಮಗಾರಿ ಬಿರುಸಿನಿಂದ ಸಾಗಿದೆ...!
ಬರೋಬರಿ 393.85 ಕೋಟಿ ರೂ. ವೆಚ್ಚದಲ್ಲಿ 12 ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗುತ್ತಿದ್ದು, ಇಡೀ ಕೆಲಸ ಮುಗಿಯಲು ಅಂದಾಜು 2 ವರ್ಷ ತೆಗೆದುಕೊಳ್ಳಲಿದೆ. ಅಲ್ಲಿಯ ವರೆಗೆ ನಗರದಲ್ಲಿ ಒಂದಿಲ್ಲವೊಂದು ಭಾಗದಲ್ಲಿ ಈ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಲಿದೆ. ಭವಿಷ್ಯದ ಅನುಕೂಲಕ್ಕಾಗಿ ಇದನ್ನು ಸವಾರರು ಸಹಿಸಿಕೊಳ್ಳಲೇ ಬೇಕಿದೆ.
ಮೊದಲ ಹಂತದಲ್ಲಿ ಮಾನಂದವಾಡಿ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ಶೇ.40 ಪೂರ್ಣಗೊಂಡಿದೆ. ಬಸವೇಶ್ವರ ವೃತ್ತದಿಂದ ಅಗ್ರಹಾರದ 101 ಗಣಪತಿ ದೇವಾಲಯ, ನಂಜುಮಳಿಗೆ ವೃತ್ತ, ಸಿಲ್ಕ್‌ಫ್ಯಾಕ್ಟರಿ ಸರ್ಕಲ್, ಶ್ರೀರಾಂಪುರದಿಂದ ರಿಂಗ್‌ರಸ್ತೆ ಜಂಕ್ಷನ್‌ವರೆಗೆ 6.4 ಕಿ.ಮೀ. ದೂರದ ರಸ್ತೆಯನ್ನು 42.74 ಕೋಟಿ ರೂ.ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡಲಾಗುತ್ತಿದ್ದು, ಒಂದು ಪಥದಲ್ಲಿ ಸುಮಾರು 4 ಕಿ.ಮೀ. ದೂರ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಲಾಗಿದೆ. ಒಂದು ಬದಿಯ ಕೆಲಸ ಅಂತಿಮ ಹಂತದಲ್ಲಿದೆ.
ಕೆಲಸ ನಡೆಯುತ್ತಿರುವುದರಿಂದ ಒಂದು ಪಥದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕೆಲವೆಡೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗುತ್ತಿದೆ. ಒಂದು ಪಥದಲ್ಲಿ ಕಾಂಕ್ರೀಟ್ ರಸ್ತೆಯಾಗಿ ಮಾಡಿ, ಕ್ಯೂರಿಂಗ್ ಮಾಡಿದ ನಂತರವಷ್ಟೇ ಮತ್ತೊಂದು ಪಥದ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ.
2ನೇ ಹಂತದಲ್ಲಿ ಬೋಗಾದಿ ರಸ್ತೆಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅರಮನೆ ಪಶ್ಚಿಮ ಗೇಟ್‌ನಿಂದ ಬೋಗಾದಿ ಗ್ರಾಮದ ವರೆಗೆ ಇದು ನಡೆಯಲಿದ್ದು, ಒಂದು ಬದಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಾಣವಾಗುತ್ತಿದೆ.
ಇನ್ನೊಂದು ಬದಿಯಲ್ಲಿ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿಕ್ಕದಾಗಿರುವ ಒಂದು ಬದಿಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಮೈಸೂರು ವಿವಿಯ ಮಾನಸಗಂಗೋತ್ರಿ ಕ್ಯಾಂಪಸ್‌ಗೆ ಪ್ರವೇಶ- ನಿರ್ಗಮನ ಕಷ್ಟಕರವಾಗಿದೆ. ಬೋಗಾದಿ ರಸ್ತೆಯಿಂದ ಹುಣಸೂರು ರಸ್ತೆ ಸಂಪರ್ಕಿಸುವ ಮಾನಸ ಗಂಗೋತ್ರಿಯಲ್ಲಿ ಹಾದುಹೋಗಿರುವ ಮಾರ್ಗವನ್ನು ಬಂದ್ ಮಾಡಲಾಗಿದೆ.
ಇಡೀ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದು, ಕೆಲಸ ಮುಗಿಸಲು ಗುತ್ತಿಗೆದಾರರಿಗೆ 2 ವರ್ಷದ ಗಡುವು ನೀಡಲಾಗಿದೆ.
ಸುದೀರ್ಘ ಬಾಳಕೆ
ಡಾಂಬಾರ್ ರಸ್ತೆಗೆ ಹೋಲಿಸಿದಾಗ ವೈಟ್‌ಟಾಪಿಂಗ್ ರಸ್ತೆ ಸುದೀರ್ಘ ಬಾಳಕೆ, ಕನಿಷ್ಠ ನಿರ್ವಹಣೆ, ಪರಿಸರ ಸ್ನೇಹಿ, ಇಂದನ ದಕ್ಷತೆ ಒದಗಿಸುತ್ತದೆ. ರಾತ್ರಿಯ ವೇಳೆಯಲ್ಲಿ ವಾಹನ ಸವಾರರಿಗೆ ಉತ್ತಮ ಗೋಚರಣೆಯಾಗುತ್ತದೆ. ಈ ರೀತಿಯ ಪ್ರಯೋಜನ ಸಾರ್ವಜನಿಕರಿಗೆ ಕಲ್ಪಿಸಿಕೊಡಲು ವೈಟ್‌ಟಾಪಿಂಗ್ ಮಾಡಲಾಗುತ್ತಿದೆ.
ವೈಟ್ ಟಾಪಿಂಗ್ ಅಂದರೆ ಕಪ್ಪು ಡಾಂಬರ್ ರಸ್ತೆಯನ್ನು ಗಟ್ಟಿಯಾದ ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತಿಸುವ ಕಾರ್ಯವಾಗಿದೆ. ನಗರದ ಚಾಮರಾಜ ಜೋಡಿ ರಸ್ತೆಯನ್ನು ದಶಕದ ಹಿಂದೆಯೇ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಗಿದ್ದು, ಇದಕ್ಕಿಂತ ಸುಧಾರಿತ ತಾಂತ್ರಿಕತೆಯ ವೈಟ್‌ಟಾಪಿಂಗ್ ಈಗ ನಗರದ ವಿವಿಧ ರಸ್ತೆಗಳಲ್ಲೂ ನಡೆಯಲಿದೆ.
ಕಳಪೆ ಡಾಂಬರೀಕರಣ, ನಿರ್ವಹಣೆ ಕೊರತೆಯಿಂದಾಗಿ ನಗರದ ಹಲವು ರಸ್ತೆಗಳು ಗುಂಡಿಬಿದ್ದಿದ್ದು, ಸಾರ್ವಜನಿಕರು, ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗಳನ್ನು ದುರಸ್ತಿ ಮಾಡುವುದಕ್ಕೆ ಕ್ರಮ ಕೈಗೊಳ್ಳದೆ ಕೇವಲ ಗುಂಡಿ ಮುಚ್ಚುವ ಹಾಗೂ ತೇಪೆ ಹಾಕುವ ಕೆಲಸವಷ್ಟೇ ಮಾಡಲಾಗುತ್ತಿತ್ತು. ಇದಕ್ಕೆ ಪರಿಹಾರ ಕಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ.
ಸಮನ್ವಯ ಸಮಿತಿ ರಚನೆ
ಕೆಲಸದ ಮೇಲುಸ್ತುವಾರಿಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಪಾಲಿಕೆ, ಸೆಸ್ಕ್, ಕಂದಾಯ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದಾರೆ. ಎಲ್ಲ ಇಲಾಖೆಗಳು ಒಪ್ಪಿಗೆ ನೀಡಿದ ಬಳಿಕವಷ್ಟೇ ಈ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ.
ದಸರಾ ಸಮೀಪಿಸುವಾಗ ಕಾಮಗಾರಿ ಸ್ಥಗಿತ
ದಸರಾ ವೇಳೆ ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿ, ದಸರಾ ಮುಗಿದ ನಂತರ ಮುಂದುವರಿಸಲು ಗುತ್ತಿಗೆದಾರರಿಗೆ ನಿರ್ದೇಶಿಸಲಾಗಿದೆ.
ಕೇಬಲ್ ಮಾರ್ಗವಿದ್ದರೆ ಸ್ಥಳಾಂತರ:
ಕಾಂಕ್ರೀಟ್ ರಸ್ತೆ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಉದ್ದೇಶಿತ ರಸ್ತೆಯಲ್ಲಿ ಒಳಚರಂಡಿ ಮಾರ್ಗ, ಕುಡಿಯುವ ನೀರಿನ ಪೈಪ್‌ಲೈನ್, ಭೂಗತ ವಿದ್ಯುತ್ ಕೇಬಲ್, ದೂರಸಂಪರ್ಕ ಮಾರ್ಗದ ಕೇಬಲ್ ಸೇರಿದಂತೆ ಇನ್ನಿತರ ಯಾವುದೇ ಮಾರ್ಗವಿದ್ದರೆ, ಅದನ್ನು ರಸ್ತೆಯ ಪಕ್ಕಕ್ಕೆ ಸ್ಥಳಾಂತರಿಸಲಾಗುತ್ತದ್ದು, ಮುಂದಿನ ದಿನಗಳಲ್ಲಿ ದುರಸ್ತಿ ಕಾರ್ಯ ನಡೆಸುವ ಅಗತ್ಯ ಬಿದ್ದರೆ ಸಹಾಯವಾಗಲೆಂದು ಪೈಪ್‌ಲೈನ್ ಮಾರ್ಗದ ಮೇಲೆ ಕಾಂಕ್ರೀಟ್ ಹಾಕದೆ ಇಂಟರ್‌ಲಾಕ್ ಅಳವಡಿಸಲಾಗುತ್ತದೆ.
ಇದು ಸ್ವಚ್ಛ ನಗರಿ ಹಿರಿಮೆ
ಈ ನಡೆಯುತ್ತಿರುವ ರಸ್ತೆ ಕಾಮಗಾರಿ 10 ವರ್ಷದ ಹಿಂದೆ ರಾಮಸ್ವಾಮಿ ವೃತ್ತದಿಂದ ಅರಮನೆ ಸುತ್ತ ಹಾಗೂ ಕೆ.ಆರ್.ವೃತ್ತದಿಂದ ಬನ್ನಿಮಂಟಪದ ಎಲ್‌ಐಸಿವೃತ್ತದ ವರೆಗೆ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗೆ ಲಿಂಕ್ ರಸ್ತೆಯಾಗಿದೆ. ಹೊಸದಾಗಿ 12 ರಸ್ತೆಗಳು ಕಾಂಕ್ರೀಟ್ ರಸ್ತೆಯಾದ ಬಳಿಕ ಮುಂದಿನ ದಿನಗಳಲ್ಲಿ ಸುಂದರ ರಸ್ತೆಗಳಾಗಿ ಮಾರ್ಪಡಲಿವೆ. ಇದು ಸ್ವಚ್ಛ ನಗರಿ ಮೈಸೂರಿಗೆ ಹಿರಿಮೆಯಾಗಲಿದೆ. ಪ್ರತಿ ವರ್ಷ ಡಾಂಬರೀಕರಣ, ಗುಂಡಿ ಮುಚ್ಚುವುದು, ತೇಪೆ ಹಾಕುವುದು, ದುರಸ್ತಿಗೆಂದು ವೆಚ್ಚ ಮಾಡುವ ಹೊರೆ ಸ್ಥಳೀಯ ಸಂಸ್ಥೆಗೆ ಇಲ್ಲದಂತಾಗುತ್ತದೆ.
ವೈಟ್‌ಟಾಪಿಂಗ್ ರಸ್ತೆಗಳ ವಿವರ
* 33.18 ಕೋಟಿ ರೂ.ನಲ್ಲಿ 4.392 ಕಿ.ಮೀ. ಉದ್ದದ ರೈಲ್ವೆ ಸ್ಟೇಷನ್ ವೃತ್ತದಿಂದ ಎಲೆತೋಟದ ಜಂಕ್ಷನ್‌ವರೆಗೆ (ಜೆಎಲ್‌ಬಿ ರಸ್ತೆ)
* 44.31 ಕೋಟಿ ರೂ.ನಲ್ಲಿ 5.649 ಕಿ.ಮೀ. ಉದ್ದದ ಮೆಟ್ರೋಪೋಲ್ ವೃತ್ತದಿಂದ ರಿಂಗ್ ರಸ್ತೆ ವರೆಗೆ (ಹುಣಸೂರು ರಸ್ತೆ)
* 36.24 ಕೋಟಿ ರೂ.ನಲ್ಲಿ 6 ಕಿ.ಮೀ. ಉದ್ದದ ಅರಮನೆ ಪಶ್ಚಿಮ ಗೇಟ್‌ನಿಂದ ಬೋಗಾದಿ ಗ್ರಾಮ ವರೆಗೆ (ಬೋಗಾದಿ ರಸ್ತೆ)
* 50 ಕೋಟಿ ರೂ.ನಲ್ಲಿ 4.941 ಕಿ.ಮೀ. ಉದ್ದದ ಜೆಎಲ್‌ಬಿ ರಸ್ತೆಯಿಂದ ರಿಂಗ್ ರಸ್ತೆ ವರೆಗೆ (ರೈಲ್ವೆ ಮ್ಯೂಸಿಯಂ-ಜಯದೇವ ಆಸ್ಪತ್ರೆ)
* 21.12 ಕೋಟಿ ರೂ.ನಲ್ಲಿ 1.512 ಕಿ.ಮೀ.ಉದ್ದದ ಸಬ್ ಅರ್ಬನ್ ಬಸ್ ನಿಲ್ದಾಣದಿಂದ ರೈಲ್ವೆ ಸ್ಟೇಷನ್ ವರೆಗೆ (ಇರ್ವಿನ್ ರಸ್ತೆ).
* 37.19 ಕೋಟಿ ರೂ.ನಲ್ಲಿ 3.633 ಕಿ.ಮೀ. ಉದ್ದದ ನೆಕ್ಸಸ್ ಸೆಂಟರ್ ಸಿಟಿ ಮಾಲ್‌ನಿಂದ ರಿಂಗ್ ರಸ್ತೆವರೆಗೆ (ಮಹದೇವಪುರ ರಸ್ತೆ)
* 67.25 ಕೋಟಿ ರೂ.ನಲ್ಲಿ 5.624 ಕಿ.ಮೀ.ಉದ್ದದ ಹಾರ್ಡಿಂಗ್ ವೃತ್ತದಿಂದ ಮಣಿಪಾಲ್ ಆಸ್ಪತ್ರೆ ವೃತ್ತದ ಮಾರ್ಗ(ಬಸ್ ನಿಲ್ದಾಣ, ಫೈವ್‌ಲೈಟ್ ಸರ್ಕಲ್, ಎಫ್‌ಟಿಎಸ್ ವೃತ್ತ, ಬನ್ನಿಮಂಟಪ ವೃತ್ತ)
* 42.74 ಕೋಟಿ ರೂ.ನಲ್ಲಿ 6,400 ಕಿ.ಮೀ. ಉದ್ದದ ಬಸವೇಶ್ವರ ವೃತ್ತದಿಂದ ರಿಂಗ್ ರಸ್ತೆವರೆಗಿನ ಮಾರ್ಗ(ಮಾನಂದವಾಡಿ ರಸ್ತೆ)
* 31.42 ಕೋಟಿ ರೂ.ನಲ್ಲಿ 3.345 ಕಿ. ಮೀ. ಉದ್ದದ ಕುಕ್ಕರಹಳ್ಳಿ ಕೆರೆ ಜಂಕ್ಷನ್‌ನಿಂದ ರಿಂಗ್‌ರಸ್ತೆ ಮಾರ್ಗ (ವಿಶ್ವಮಾನವ ಜೋಡಿ ರಸ್ತೆ).
* 7.39 ಕೋಟಿ ರೂ.ನಲ್ಲಿ 1.222 ಕಿ.ಮೀ. ಉದ್ದದ ನಜರ್‌ಬಾದ್ ವಾಣಿ ವಿಲಾಸ ಕಾಲೇಜಿನಿಂದ ಮೈಸೂರು ಮಾಲ್ ವರೆಗೆ (ಝೂ ಮುಂಭಾಗದ ರಸ್ತೆ)
* 17.17 ಕೋಟಿ ರೂ.ನಲ್ಲಿ 2.482 ಕಿ.ಮೀ. ಉದ್ದದ ಹಾರ್ಡಿಂಗ್ ವೃತ್ತದಿಂದ ಸರ್ಕಾರಿ ಅತಿಥಿ ಗೃಹ ಆರ್ಚ್ ಮಾರ್ಗ (ಪೊಲೀಸ್ ಕಮೀಷನರ್ ಕಚೇರಿ, ಚಾಮುಂಡಿ ವಿಹಾರ ಸ್ಟೇಡಿಯಂ)
* 5.84 ಕೋಟಿ ರೂ.ದಲ್ಲಿ 8.88 ಕಿ. ಮೀ ಉದ್ದದ ಹಾರ್ಡಿಂಗ್ ವೃತ್ತದಿಂದ ಸಬ್ ಅರ್ಬನ್ ಬಸ್ ನಿಲ್ದಾಣ (ಸಿದ್ಧಾರ್ಥ ಹೋಟೆಲ್, ತಾಲೂಕೂ ಕಚೇರಿ)ವರೆಗೆ
"
ಈಗಾಗಲೇ ಮಾನಂದವಾಡಿ ರಸ್ತೆಯಲ್ಲಿ ಎನ್‌ಐಇ ಕಾಲೇಜು ಬಳಿ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಬೋಗಾದಿ ರಸ್ತೆಯಲ್ಲೂ ಕೆಲಸ ಶುರುವಾಗಿದೆ. ರಸ್ತೆಯಲ್ಲಿ ಯಾವುದೇ ಪೈಪ್‌ಲೈನ್, ಕೇಬಲ್ ಮಾರ್ಗ ಇಲ್ಲದೇ ಇರುವುದರನ್ನು ಖಚಿತ ಪಡಿಸಿಕೊಳ್ಳಲಾಗಿದೆ. ವಾಹನ ಸವಾರರಿಗೆ ತೊಂದರೆಯಾಗದಂತೆ ಒಂದೊಂದೇ ಪಥದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗುತ್ತದೆ.
— ಮಹದೇವಸ್ವಾಮಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ