ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಜಿ.ಲಕ್ಷ್ಮೀಕಾಂತ್ ರೆಡ್ಡಿ, ಎಸ್.ಯುಕೇಶ್‌ಕುಮಾರ್, ಸೀಮಾಲಾಟ್ಕರ್, ಕೆ.ಎಸ್.ಸುಂದರರಾಜ್, ಪರಮೇಶ್ ಇದ್ದರು. 
ಮೈಸೂರು

15ರ ಬಳಿಕ ವೈಟ್ ಟ್ಯಾಪಿಂಗ್ ಕಾಮಗಾರಿ ಸ್ಥಗಿತ

ಪ್ರಮುಖ ಮುಖ್ಯಾಂಶಗಳು

  • ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸೂಚನೆ
  • ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ವೇಳೆ ಸಂಚಾರ ದಟ್ಟಣೆ ತಪ್ಪಿಸಲು ಆಗಸ್ಟ್ 15ರ ಬಳಿಕ ನಗರದಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ಸ್ಥಗಿತಗೊಳಿಸಿ, ದಸರಾ ಮುಗಿದ ಬಳಿಕವೇ ಹೊಸ ರಸ್ತೆ ಕಾಮಗಾರಿ ಆರಂಭಿಸುವಂತೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಮುಖ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಗಳಿಂದ ಯಾವುದೇ ಸಂಚಾರ ಅಡಚಣೆ ಉಂಟಾಗಬಾರದು. ಈಗಾಗಲೇ ಆರಂಭಿಸಿರುವ ವೈಟ್ ಟ್ಯಾಪಿಂಗ್ ಕಾಮಗಾರಿಗಳಿರುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ದಸರಾ ಅವಧಿಯಲ್ಲಿ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಬಾರದು. ಕಾಮಗಾರಿಗಳ ಗುಣಮಟ್ಟವನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಪದ್ಮನಾಭ ಮಾಹಿತಿ ನೀಡಿ, ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಜೂರಾದ 20 ಕಾಮಗಾರಿಗಳಲ್ಲಿ ಒಂದು ಪೂರ್ಣಗೊಂಡಿದ್ದು, 16 ಕಾಮಗಾರಿಗಳು ಪ್ರಗತಿಯಲ್ಲಿವೆ. ಮೂರು ಕಾಮಗಾರಿಗಳು ಆರಂಭವಾಗಬೇಕಿದ್ದು, ಮಾನಂದವಾಡಿ ಹಾಗೂ ಬೋಗಾದಿ ಮುಖ್ಯರಸ್ತೆ ಸೇರಿ 6 ಕಿ.ಮೀ ವೈಟ್ ಟ್ಯಾಪಿಂಗ್ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರವಾಸಿಗರಿಗೆ ತೊಂದರೆಯಾಗಬಾರದು. ಈಗ ವೈಟ್ ಟ್ಯಾಪಿಂಗ್ ನಡೆಯುತ್ತಿರುವ ಮಾರ್ಗಗಳಲ್ಲಿ ವಾಹನಗಳು ಹೋಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು. ದಸರಾ ಮುಗಿದ ಮೇಲೆ ಹೊಸ ಕಾಮಗಾರಿ ಶುರು ಮಾಡಬೇಕು. ವೈಟ್ ಟ್ಯಾಪಿಂಗ್ ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕು. ಪದೇಪೆ ವರದಿ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಬಂಡೀಪಾಳ್ಯದ ದೇವಲಾಪುರ ಮೇಲ್ಸೇತುವೆ ಕಾಮಗಾರಿ ಹಾಗೂ ಮಣಿಪಾಲ್ ಜಂಕ್ಷನ್ ರಸ್ತೆ ಕಾಮಗಾರಿಯಿಂದ ದಸರಾ ವೇಳೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಪ್ಯಾಚ್ ವರ್ಕ್ ಮುಗಿಸಲು ಸೂಚನೆ:

ದಸರಾ ಮಹೋತ್ಸವ ಆರಂಭಕ್ಕೂ ಮೊದಲು ನಗರದಲ್ಲಿ ಕೈಗೊಳ್ಳುವ ಮುನ್ನ ಪ್ಯಾಚ್ ವರ್ಕ್ ಮುಗಿಸಬೇಕು ಎಂದು ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ದಸರಾ ಹೊತ್ತಲ್ಲಿ ಕಾಮಗಾರಿ ಮಾಡಿದರೆ ಸಂಚಾರ ಸಮಸ್ಯೆಯಾಗಲಿದೆ. ಕೆಲವು ಕಡೆ ಮುಗಿಯದೆ ದಸರಾ ಪ್ರಾರಂಭವಾದ ಮೇಲೂ ಕಾಮಗಾರಿ ನಡೆಯುವುದಕ್ಕೆ ಕಡಿವಾಣ ಹಾಕಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಪಾಲಿಕೆ ಅಧೀಕ್ಷಕ ಇಂಜಿನಿರ್ ಕೆ.ಜೆ.ಸಿಂಧು, ಪ್ಯಾಚ್ ವರ್ಕ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮುಗಿಸುವ ಷರತ್ತು ಗುತ್ತಿಗೆದಾರರಿಗೆ ವಿಧಿಸಲಾಗುವುದು ಎಂದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ರಸ್ತೆಗಳಲ್ಲಿ ಜೀಬ್ರಾ ಕ್ರಾಸ್ ಪೇಂಟಿಂಗ್ ಅನ್ನು ಪಾಲಿಕೆಯೇ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಪೊಲೀಸ್ ಇಲಾಖೆ ನೀಡುವ ಪಟ್ಟಿಯಂತೆ ಅಗತ್ಯ ರಸ್ತೆಗಳಲ್ಲಿ ಜೀಬ್ರಾ ಕ್ರಾಸ್ ಪೇಂಟಿಂಗ್ ಮಾಡುವಂತೆ ಪಾಲಿಕೆಗೆ ಸೂಚನೆ ನೀಡಿದರು.
ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್,ಡಿಸಿಪಿ ಕೆ.ಎಸ್.ಸುಂದರರಾಜ್, ಡಿಸಿಎಫ್ ಪರಮೇಶ್, ಕಾವೇರಿ ನೀರಾವರಿ ನಿಗಮದ ಮಂಡ್ಯ ಎಸ್‌ಇ ರಘುರಾಮ್, ಮೈಸೂರು ಎಸ್‌ಇ ರಘುಪತಿ, ಹಾರಂಗಿ ಎಸ್‌ಇ ಸತೀಶ್, ಎನ್‌ಎಚ್‌ಎಐ ಕಾರ್ಯಪಾಲಕ ಅಭಿಯಂತರ ಸಿರೀಸ್ ಗಂಗಾಧರ್,ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಈರಣ್ಣ, ಭಾಸ್ಕರ್,ಸೆಸ್ಕ್ ಅಧೀಕ್ಷಕ ಅಭಿಯಂತರ ಸುನಿಲ್‌ಕುಮಾರ್ ಇದ್ದರು.