ಪರಶುರಾಮೇಗೌಡ  
ಮೈಸೂರು

ತರಾತುರಿಯಲ್ಲಿ ಮರ ಕಡಿಯುವ ಅಗತ್ಯವೇನು?: ಪರಶುರಾಮೇಗೌಡ ಪ್ರಶ್ನೆ

ಪ್ರಮುಖ ಮುಖ್ಯಾಂಶಗಳು

  • ಜಾಗ ತಮ್ಮ ಸುಪರ್ದಿಗೆ ಬರುವ ಮೊದಲೇ ಇಲಾಖೆ ಅಧಿಕಾರಿಗಳು ಸುಮಾರು 36 ಮರಗಳನ್ನು ಕಡಿಯಲು ಮುಂದಾಗಿದ್ದು ಏಕೆ?
  • ಎಫ್‌ಐಆರ್ ದಾಖಲಾದ ಮೇಲೂ ನಿರ್ಮಿತಿ ಕೇಂದ್ರದಿಂದ ಅರಣ್ಯ ಇಲಾಖೆಗೆ ಪತ್ರ ಬರೆದು ಮರಗಳನ್ನು ತೆರವುಗೊಳಿಸಲು ಅನುಮತಿ ಕೋರಿದೆ
ಮೈಸೂರು:ನಗರದಲ್ಲಿ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣಕ್ಕಾಗಿ ಜಾಗ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಇದುವರೆಗೆ ಅದರ ವಿಸ್ತೃತ ಯೋಜನಾ ವರದಿ ಸಿದ್ಧವಾಗಿಲ್ಲ. ಆದರೂ ಆ ಸ್ಥಳದಲ್ಲಿ ತರಾತುರಿಯಲ್ಲಿ ಮರ ಕಡಿಯುತ್ತಿರುವುದು ಅನುಮಾನ ಮೂಡಿಸಿದೆ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ದೂರಿದರು.
ಕಂಬಳದ ಸಿದ್ಧತೆ ಮಾಡಿಕೊಂಡ ಬಳಿಕ ಸಾತಗಳ್ಳಿ ಸರ್ವೇ ನಂ. 85, 88, 106 ಹಾಗೂ 107ರ ವ್ಯಾಪ್ತಿಯ ಸುಮಾರು 17.5 ಎಕರೆ ಜಾಗವನ್ನು 2026ರ ಮೇ 27ರಂದು ನಗರಾಭಿವೃದ್ಧಿ ಇಲಾಖೆಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆ ಮಾಡಲು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಅಧಿಕೃತ ಹಸ್ತಾಂತರ ಮಾತ್ರ ಜುಲೈ 22ರಂದು ನಡೆದಿದ್ದು, ಜಾಗ ತಮ್ಮ ಸುಪರ್ದಿಗೆ ಬರುವ ಮೊದಲೇ ಇಲಾಖೆ ಅಧಿಕಾರಿಗಳು ಸುಮಾರು 36 ಮರಗಳನ್ನು ಕಡಿದು, ಗಿಡಗಂಟಿ ಹಾಗೂ ಪೊದೆಗಳನ್ನು ತೆರವುಗೊಳಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎಫ್‌ಐಆರ್ ದಾಖಲಾದ ಮೇಲೂ ನಿರ್ಮಿತಿ ಕೇಂದ್ರದಿಂದ ಅರಣ್ಯ ಇಲಾಖೆಗೆ ಪತ್ರ ಬರೆದು ಮರಗಳನ್ನು ತೆರವುಗೊಳಿಸಲು ಅನುಮತಿ ಕೋರಿದೆ. ಅರಣ್ಯ ಇಲಾಖೆ ಉಳಿದ ಮರಗಳನ್ನು ಉಳಿಸಿಕೊಂಡು ಸ್ವಚ್ಛತಾ ಕಾರ್ಯ ಮಾತ್ರ ನಡೆಸಲು ಸೂಚಿಸಿದ್ದರೂ ಮತ್ತೆ ಮರ ಕಡಿಯಲು ಅನುಮತಿ ಕೋರಿ ಪತ್ರ ವ್ಯವಹಾರ ನಡೆದಿರುವ ಕಾರಣ ಏನು ಎಂದು ಪ್ರಶ್ನಿಸಿದರು.
ಈ ಮೊದಲು ಎಲ್ಲ ಮರಗಳನ್ನು ತೆರವುಗೊಳಿಸಲು ಅನುಮತಿ ಕೋರಲಾಗಿತ್ತು. ಬಳಿಕ ಹಂತ ಹಂತವಾಗಿ ಕೇವಲ 18 ಮರಗಳನ್ನು ಕಡಿಯಲು ಅನುಮತಿ ಕೇಳಲಾಗಿದೆ. ಆದರೆ ಅರಣ್ಯ ಇಲಾಖೆ 33 ಮರಗಳಿಗೆ ಗುರುತು ಹಾಕಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.
ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣಕ್ಕಾಗಿ ಜಾಗ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಇದುವರೆಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗಿಲ್ಲ. ಟೆಂಡರ್ ಕರೆಯಲಾಗಿಲ್ಲ. ಹೀಗಿರುವಾಗ ತರಾತುರಿಯಲ್ಲಿ ಮರಗಳನ್ನು ತೆರವುಗೊಳಿಸುತ್ತಿರುವುದು ದಸರಾ ಕಂಬಳ ಆಯೋಜನೆಗೆ ಸಿದ್ಧತೆ ನಡೆಸುವ ಉದ್ದೇಶದಿಂದಲೇ ಎಂಬ ಅನುಮಾನ ಮೂಡಿದೆ ಎಂದರು.
ಈ ವಿಷಯವನ್ನು ಮುಖ್ಯ ಕಾರ್ಯದರ್ಶಿ, ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಲೋಕಾಯುಕ್ತರ ಗಮನಕ್ಕೆ ತರಲಾಗುವುದು. ಜತೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲೂ ವಿಷಯ ಪ್ರಸ್ತಾಪವಾಗಲಿದೆ ಎಂದು ತಿಳಿಸಿದರು.
ಅಪ್ಪಿಕೋ ಮಾದರಿ ಚಳವಳಿ:
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಇಲ್ಲಿರುವ ಮರಗಳನ್ನು ಉಳಿಸಿಕೊಳ್ಳುವ ಸಂಬಂಧ ಮುಂದಿನ ವಾರ ಅಪ್ಪಿಕೋ ಚಳವಳಿ ನಡೆಸಲಾಗುತ್ತದೆ ಎಂದರು.
ಕಂಬಳಕ್ಕೆ ವಿರೋಧ ವ್ಯಕ್ತವಾಗಿರುವ ಕುರಿತು ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಶೀಘ್ರದಲ್ಲಿಯೇ ಎಲ್ಲರೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.