ಪ್ರತಾಪಸಿಂಹ 
ಮೈಸೂರು

ತವರು ಜಿಲ್ಲೆಗೆ ಸಿದ್ದರಾಮಯ್ಯ ಅವರ ಕೊಡುಗೆ ಏನು? : ಮಾಜಿ ಸಂಸದ ಪ್ರತಾಪಸಿಂಹ

ಪ್ರಮುಖ ಮುಖ್ಯಾಂಶಗಳು

  • ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿರುವ ಸಿದ್ದರಾಮಯ್ಯ ಅವರು ಏನು ಕೊಡುಗೆ ನೀಡಿದ್ದಾರೆ
  • ಪಂಚ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕಾಂಗ್ರೆಸ್ ವಿಫಲ
ಮೈಸೂರು: ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿರುವ ಸಿದ್ದರಾಮಯ್ಯ ಅವರು ತವರು ಜಿಲ್ಲೆಗೆ ತಮ್ಮ ಕೊಡುಗೆ ಏನು ಎಂದು ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದರು.
ಸಿದ್ದರಾಮಯ್ಯ ಅತಿ ಹೆಚ್ಚಿನ ಅವಧಿಗೆ ಸಿಎಂ ಆಗಿ ದಾಖಲೆ ನಿರ್ಮಿಸಿದ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರನ್ನು ಡಿ.ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. ದೇವರಾಜ ಅರಸು ಅವರು ತಮ್ಮ ಅವಧಿಯಲ್ಲಿ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳನ್ನು ಗ್ರಾಮಾಂತರ ಮಟ್ಟದಲ್ಲಿ ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಹಾಗೇಯೇ ಮುಖ್ಯಮಂತ್ರಿಯಾಗಿ ತವರಲ್ಲಿ ಸಿದ್ದರಾಮಯ್ಯ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಮ್ಮ ತಕರಾರಿಲ್ಲ. ಆದರೆ ಗ್ಯಾರಂಟಿ ಯೋಜನೆ ಸರಿಯಾಗಿ ನಡೆಯುತ್ತಿಲ್ಲ. ಎರಡು ಸಾವಿರ ರೂ. ನಿಜಕ್ಕೂ ಬರುತ್ತಿದೆಯೇ? ಯುವನಿಧಿ ಈವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಕರೆಂಟ್ ಬಿಲ್ ಹಣವನ್ನು ಎಲ್ಲೋ ಕಿತ್ತು ಎಲ್ಲೋ ಕೊಡುತ್ತಿದ್ದಾರೆ. ಉಚಿತ ಬಸ್ ಸಂಚಾರ ಯೋಜನೆಯಿಂದಾಗಿ ಕೆಎಸ್‌ಆರ್‌ಟಿಸಿ ಆರ್ಥಿಕ ನಷ್ಟದಲ್ಲಿದ್ದು, ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ಕಾಂಗ್ರೆಸ್ ನಾಯಕರೇ ಹೇಳಬೇಕು. ನಮಗೆ ಸಿಎಂ ಬದಲಾವಣೆ ಬಗ್ಗೆ ಚಿಂತೆ ಇಲ್ಲ. ಜನರಿಗೆ ಒಳ್ಳೆಯ ಕಾನೂನು ಸುವ್ಯವಸ್ಥೆ ಕೊಡುವ ಮುಖ್ಯಮಂತ್ರಿ ಬೇಕಾಗಿದೆ. ಆದರೆ ಸಿಎಂ ಬದಲಾವಣೆ ಮಾಡಿದರೆ ಇದೆಲ್ಲಾ ಸಾಧ್ಯ ಎಂದು ನಮಗೆ ಅನಿಸುತ್ತಿಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣ ಖಂಡನೀಯ. ಆಧಿಕಾರಿಗಳು ಕಾಂಗ್ರೆಸ್ ಕೈಗೊಂಬೆ ಆಗಿದ್ದು, ರಾಜ್ಯದಲ್ಲಿ ಸರಿಯಾದ ಕಾನೂನು ಸುವ್ಯವಸ್ಥೆ ಇಲ್ಲ. ಕಾಂಗ್ರೆಸ್ ಹೇಳಿಕೆ, ನಡವಳಿಕೆಗೆ ಪೂರಕವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಳ್ಳಾರಿಯಲ್ಲಿ ಪಾಲಿಟಿಕ್ಸ್ ನಡೆಯುತ್ತಿದ್ದು, ನಮ್ಮ ಮನೆಯ ಮುಂದೆ ನಿಮ್ಮ ಫ್ಲೆಕ್ಸ್, ಬಾವುಟ ಹಾಕುವುದು ಎಷ್ಟು ಸರಿ? ಇದು ಸಹಜವಾಗಿ ನಡೆದ ಗಲಾಟೆಗೆ ಆಗಿದ್ದರೂ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿದ್ದಾರೆ. ಗಲಾಟೆ ಮಾಡುವ ಉದ್ದೇಶದಿಂದ ಇಂತಹ ಕೃತ್ಯ ಮಾಡಿದ್ದಾರೆ. ಮೊದಲು ಟಿಪ್ಪು ಹೆಸರಿನಲ್ಲಿ ಗಲಾಟೆ ಮಾಡಿಸುತ್ತಿದ್ದರು. ಈಗ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು, ಅವುಗಳನ್ನು ಮುಚ್ಚಿಹಾಕಲು ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಯಾರೊಬ್ಬರ ಎಂಟ್ರಿ ಹಾಗೂ ಎಕ್ಸಿಟ್ ತೀರ್ಮಾನವನ್ನು ಪಕ್ಷದ ರಾಜ್ಯ, ರಾಷ್ಟ್ರದ ವರಿಷ್ಠರು ತೀರ್ಮಾನಿಸುತ್ತಾರೆ. ಎಲ್ಲರೂ ಒಗ್ಗೂಡಿ ಪಕ್ಷಕ್ಕಾಗಿ ಕೆಲಸ ಮಾಡುವುದು ಮೊದಲ ಆದ್ಯತೆ ಆಗಬೇಕಿದೆ. ಟಿಕೆಟ್‌ಗೆ ಹಲವು ಆಕಾಂಕ್ಷಿಗಳಿದ್ದರೂ, ಅಂತಿಮ ತೀರ್ಮಾನ ಮಾಡುವುದು ಪಕ್ಷದ ವರಿಷ್ಠರಾಗಿದ್ದು, ಪಕ್ಷದ ಗೆಲುವಿಗಾಗಿ ಶ್ರಮಿಸುವುದು ಎಲ್ಲರ ಕರ್ತವ್ಯ. ವರಿಷ್ಠರು ಯಾರಿಗೆ ಸೂಚಿಸುತ್ತಾರೆಯೋ ಅವರಿಗೆ ನಮ್ಮ ಬೆಂಬಲ ಎಂದು ಎಲ್.ನಾಗೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.