ಹುಣಸೂರು ತಾಲೂಕು ಕಿರಿಜಾಜಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮದ ಹೋರಾಟಗಾರ ರೈತರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹೊಸೂರು ಕುಮಾರ್, ಬೆಂಕಿಪುರ ಚಿಕ್ಕಣ್ಣ, ಮರಂಕಯ್ಯ, ಹೊಸಕೋಟೆ ಬಸವರಾಜು ಇತರರಿದ್ದಾರೆ.
ಹುಣಸೂರು: ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಹುಸಿಯಾಗಿದ್ದು, ರೈತ ಸಮೂಹ ಕೃಷಿಕಾಯ್ದೆ ವಿರುದ್ಧ ಮತ್ತೆ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದರು.
ರೈತಸಂಘದ ತಾಲೂಕು ಘಟಕದ ವತಿಯಿಂದ ಭಾನುವಾರ ತಾಲೂಕಿನ ಕಿರಿಜಾಜಿ ಗ್ರಾಮದಲ್ಲಿ ಆಯೋಜಿಸಿದ್ದ ರೈತಸಂಘ ಸ್ಥಾಪನೆಯ 25ನೇ ವರ್ಷದ ಸಂಭ್ರಮ, ನೂತನ ನಾಮಫಲಕ ಅನಾವರಣ ಮತ್ತು ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತವಿರೋಧಿ ನೀತಿಯನ್ನು ಅನುಸರಿಸುವುದನ್ನು ನಿಲ್ಲಿಸಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯದಲ್ಲಿ ರದ್ದುಪಡಿಸುವ ಭರವಸೆ ನೀಡಿತ್ತು. ಎರಡೂವರೆ ವರ್ಷಗಳಾದರೂ ಕಾಯ್ದೆಗಳನ್ನು ರದ್ದುಗೊಳಿಸುವ ಗೋಜಿಗೆ ಹೋಗಿಲ್ಲ. ಇದೀಗ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೈಲ್ಯಾಟರಲ್ ಟ್ರೇಡ್ ಅಗ್ರಿಮೆಂಟ್, ಫ್ರೀಟ್ರೇಡ್ ಅಗ್ರಿಮೆಂಟ್ ಮುಂತಾದ ಒಪ್ಪಂದಗಳೊಂದಿಗೆ ರೈತವಿರೋಧಿ ನೀತಿ ಅನುಸರಿಸಲು ಹೊರಡುತ್ತಿದೆ. ಸೀಡ್ ಬಿಲ್ ಮಂಡಿಸುವ ಸಿದ್ಧತೆಯಲ್ಲಿದೆ. ಈ ಎಲ್ಲ ಒಪ್ಪಂದಗಳು ರೈತರ ಹಿತಕ್ಕೆ ವಿರುದ್ಧವಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನೂ ಅರಿತುಕೊಂಡು ಸರ್ಕಾರಗಳ ವಿರುದ್ಧ ಹೋರಾಟದ ಹೆಜ್ಜೆ ಇಡುವ ಅಗತ್ಯತೆ ಇದೆ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಅಂದಿನ ಸಿಎಂ ಎಸ್.ಎಂ. ಕೃಷ್ಣ ಸರ್ಕಾರದ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮುಂದಾದಾಗ ಇಲ್ಲಿಂದಲೇ ರೈತ ಹೋರಾಟದ ಕಿಡಿ ಹೊತ್ತಿತು. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ರೈತರು ದಶಕಗಳ ಕಾಲ ಹೋರಾಟ ನಡೆಸಿ ಜಯಶಾಲಿಗಳಾದರು. ಇಂದಿಗೂ ಕಿರಿಜಾಜಿ ಗ್ರಾಮ ರೈತರ ಹೋರಾಟದ ಕೇಂದ್ರವಾಗಿದೆ. ಸರ್ಕಾರಗಳು ರೈತ ನೀತಿಯಲ್ಲಿನ ಬದಲಾವಣೆಗೆ ರೈತಸಂಘದ ಹೋರಾಟಗಳೇ ಕಾರಣ ಹೊರತು ಇನ್ಯಾರು ಅಲ್ಲವೆನ್ನುವುದನ್ನು ನಾವೆಲ್ಲರೂ ಅರಿತು ನಮ್ಮವರಿಗಾಗಿ ಹೋರಾಟ ಮುಂದುವರಿಸೋಣ ಎಂದರು.
ರೈತಸಂಘದ ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ರಾಜ್ಯದ ರೈತ ಕಣ್ಮಣಿಗಳಾದ ರುದ್ರಪ್ಪ, ನಂಜುಂಡಸ್ವಾಮಿ, ಸುಂದರೇಶ್ ಮತ್ತು ಪುಟ್ಟಣ್ಣಯ್ಯರ ಶ್ರಮದಿಂದ 45 ವರ್ಷಗಳ ಹಿಂದೆ ಸ್ಥಾಪಿಸಿದ ರೈತಸಂಘ ಇಂದು ಹೆಮ್ಮರವಾಗಿ ಬೆಳೆದುನಿಂತಿದೆ. ನರಗುಂದ-ನವಲಗುಂದದ 136 ರೈತರ ನರಮೇಧವೇ ರೈತಸಂಘದ ಸ್ಥಾಪನೆಗೆ ಕಾರಣವಾಯಿತು. ದೇಶದ ಆರ್ಥಿಕತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ.70ರಷ್ಟು ತೆರಿಗೆ ನೀಡುವ ರೈತ ಸಮೂಹಕ್ಕೆ ಇಂದಿಗೂ ನ್ಯಾಯ ದೊರತಿಲ್ಲ. ಆಳುವ ಸರ್ಕಾರಗಳು ಶೇ.1ರಷ್ಟಿರುವ ಬಂಡವಾಳಶಾಹಿಗಳ ಪರ ಇದೆ. ರೈತರ ಹೋರಾಟದಿಂದಾಗಿಯೇ ಮೂರು ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ಯಶಸ್ವಿನಿ ಜಾರಿ, ಹಾವು ಕಚ್ಚಿ ಮೃತಪಟ್ಟರೆ ಪರಿಹಾರ, ಬಗರ್‌ಹುಕುಂ ಹೋರಾಟ ಎಲ್ಲವೂ ರೈತರ ಹೋರಾಟದ ಫಲವಾಗಿದೆ. ಹಾಗಾಗಿ ಹೋರಾಟವೇ ನಮ್ಮ ಮೂಲಮಂತ್ರವಾಗಬೇಕೆಂದರು.
ರೈತಸಂಘದ ಮಹಿಳಾಧ್ಯಕ್ಷೆ ನೇತ್ರಾವತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 25 ವರ್ಷಗಳ ಹಿಂದೆ ಸೆಸ್ಕ್ ವಿರುದ್ಧ ಹೋರಾಟ ನಡೆಸಿದ ಯಜಮಾನ ಶಿವಶಂಕರ್, ಮಹೇಶ್, ಚಂದ್ರಶೇಖರ್, ಡಿ.ಕುಮಾರ್, ಶಿವಕುಮಾರ್, ಪುಟ್ಟವೀರಮ್ಮ, ಕೆ.ಜೆ.ಹರೀಶ್ ಅವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮರಂಕಯ್ಯ, ಪ್ರಭಾಕರ್, ತಟ್ಟೆಕರೆ ಕೃಷ್ಣೇಗೌಡ, ತಾಲೂಕು ಪ್ರಧಾನಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ತಂಬಾಕು ಕಾಫ್ ಸಮಿತಿ ಸದಸ್ಯ ನಿಲುವಾಗಿಲು ಪ್ರಭಾಕರ್, ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ. ಚಂದ್ರೇಗೌಡ, ಅಧ್ಯಕ್ಷ ಮೋದೂರು ಶಿವಣ್ಣ, ಮಂಟಗಳ್ಳಿ ಮಹೇಶ್, ಬೆಟ್ಟದಪುರ ರಾಜಣ್ಣ, ಕಲ್ಲಹಳ್ಳಿ ಜಯಣ್ಣ, ಕಲ್ಲಹಳ್ಳಿ ವಿಷಕಂಠಪ್ಪ, ಪಟೇಲ್ ಶಂಕರ್, ಈಶ್ವರ್, ಕಿರಿಜಾಜಿ ಮಹದೇವ್, ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಬಲ್ಲೇನಹಳ್ಲಿ ಕೆಂಪರಾಜು, ಕಿರಿಜಾಜಿ ಗಜೇಂದ್ರ ಮತ್ತು ಗ್ರಾಮಸ್ಥರು ಇದ್ದರು.