ಮೈಸೂರು ನಗರದ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಮಠದಲ್ಲಿ ಗುರುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಸಂಚಾಲಕ ಮೋಹನ್ ಭಾಗವತ್ ಉಪನ್ಯಾಸ ನೀಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದರು.
ಮೈಸೂರು: ಭಾರತೀಯರಾದ ನಾವೆಲ್ಲರು ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಕೇವಲ ಭಾವನೆ ಮೂಡಿದರೆ ಸಾಲದು ಅದನ್ನು ಆಚರಣೆಗೆ ತರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಸಂಚಾಲಕ ಮೋಹನ್ ಭಾಗವತ್ ಹೇಳಿದರು
ನಗರದ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಮಠದಲ್ಲಿ ಗುರುವಾರ ಆಯೋಜಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ 15ನೇ ವಿಶೇಷ ಉಪನ್ಯಾಸದಲ್ಲಿ ‘ರಾಷ್ಟ್ರೀಯ ಅಭಿವೃದ್ಧಿಗೆ ಸಾಮಾಜಿಕ ಸೌಹಾರ್ದತೆ ಪ್ರೇರಕ’ ವಿಷಯದ ಕುರಿತು ಮಾತನಾಡಿ, ನಮ್ಮ ಸಹೋದರರನ್ನು ಅಸ್ಪಶ್ಯರು ಎಂಬ ಕಾರಣಕ್ಕಾಗಿ ಶತಮಾನಗಳ ಕಾಲ ದೂರ ಇಟ್ಟಿರುವುದು ಬೇಸರದ ಸಂಗತಿ. ಈ ರೀತಿಯ ಮೇಲು, ಕೀಳು ಎಂಬ ಭಾವ ದೂರವಾಗಿ ನಾವೆಲ್ಲರು ಒಂದು ಎಂಬ ಭಾವನೆ ಮೂಡಬೇಕು. ಇದಕೋಸ್ಕರ ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಬೇಕು. ನಮಗೆ ನಾಶವಾಗದ ಸಂತೋಷ ದೊರೆಯಬೇಕಾದರೆ ಎಲ್ಲರೂ ಒಂದೇ ಎಂಬ ಸದ್ಭಾವನೆ ಮೂಡಬೇಕು ಎಂದು ಅಭಿಪ್ರಾಯಪಟ್ಟರು.
ಭಾರತೀಯ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿ ಸಾಕಷ್ಟು ಭಿನ್ನವಾಗಿದೆ. ನಮ್ಮ ಸಮಾಜದಲ್ಲಿ ಸಹಕಾರ ಮತ್ತು ಸಮನ್ವಯತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ, ಪಾಶ್ಚಿಮಾತ್ಯರಲ್ಲಿ ಸಮಾಜ ಎಂದರೆ ಬದುಕುಳಿಯಲು ನಡೆಸುವ ಹೋರಾಟ ಎಂದರ್ಥ. ಹೀಗಾಗಿ ನಾವು ಅವರಿಗಿಂತ ಭಿನ್ನವಾಗಿದ್ದೇವೆ. ಮನುಷ್ಯ ಸಂಘ ಜೀವಿಯಾಗಿದ್ದು, ಆತ ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಈ ಕಾರಣಕ್ಕೆ ಪರಸ್ಪರ ಸಹಕಾರದೊಂದಿಗೆ ಮುನ್ನಡೆಯಬೇಕು ಎಂದು ಹೇಳಿದರು.
ದೇಶದಲ್ಲಿ ವಿವಿಧ ಭಾಷೆ, ಜಾತಿ, ಪ್ರಾಂತ್ಯಗಳು ಇವೆ. ಭಾಷೆ, ಜಾತಿ, ಪಂಗಡಗಳನ್ನು ಮೀರಿ ಬಂಧುತ್ವ ನೆಲೆಗೊಳ್ಳಬೇಕು. ಅಸ್ತಿತ್ವಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಟ ನಡೆಸುವುದು ಪಾಶ್ಚಿಮಾತ್ಯ ಪರಿಕಲ್ಪನೆಯಾಗಿದೆ. ಆದರೆ, ಭಾರತೀಯರು ಭ್ರಾತೃತ್ವ ಮತ್ತು ಪರಸ್ಪರ ಸಹಾಯದೊಂದಿಗೆ ನಾಗರಿಕತೆ ಕಟ್ಟಿದ್ದಾರೆ. ನಮ್ಮ ಸಮಾಜವು, ಪರೋಪಕಾರವೇ ಸೇವೆ, ಕರ್ತವ್ಯವೇ ಜೀವನದ ಪರಮ ಗುರಿ ಹೊಂದಿದೆ ಎಂದರು.
ಅಭಿವೃದ್ಧಿ ಎಂಬುದು ಕೇವಲ ಕಟ್ಟಡಗಳ ನಿರ್ಮಾಣ ಅಥವಾ ಕೆಲವು ವ್ಯಕ್ತಿಗಳ ಅಭಿವೃದ್ಧಿಗೆ ಸೀಮಿತವಾಗಬಾರದು. ಸ್ವಾತಂತ್ರೃ ಪೂರ್ವದಲ್ಲೂ ನಮ್ಮಲ್ಲಿ ಶ್ರೀಮತರು ಇದ್ದರು, ಇಂದಿಗೂ ಇದ್ದಾರೆ. ಆದರೆ, ನಿಜವಾದ ಅಭಿವೃದ್ಧಿ ಎಲ್ಲರಲ್ಲೂ ಆಗಬೇಕು. ಮತ್ತೊಬ್ಬರಿಗೆ ಹಾನಿ ಮಾಡಿ ನಾವು ಸಂಪಾದನೆ ಮಾಡಬಾರದು. ಅಂತಹ ಸದ್ಭಾವನೆ ನಮ್ಮಲ್ಲಿ ಮೂಡಬೇಕು ಎಂದು ಹೇಳಿದರು.
ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಭಾಷಣಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕು. ‘ಸಾಮಾಜಿಕ ಸ್ವಾತಂತ್ರೃ ನೆಲೆಗೊಳ್ಳದೆ ರಾಜಕೀಯ, ಆರ್ಥಿಕ ಸ್ವಾತಂತ್ರೃ ಸಿಗುವುದಿಲ್ಲ’ ಎಂದು ಅಂಬೇಡ್ಕರ್ ಹೇಳಿದ್ದರು. ಸಂವಿಧಾನದಲ್ಲಿ ಪ್ರಸ್ತಾಪಿಸಿರುವ ಸ್ವಾತಂತ್ರೃ, ಸಮಾನತೆ, ಭ್ರಾತೃತ್ವ ಪದಗಳನ್ನು ಫ್ರೆಂಚ್ ಕ್ರಾಂತಿಯಿಂದ ತೆಗೆದುಕೊಂಡದ್ದಲ್ಲ, ಈ ಪರಿಕಲ್ಪನೆಯು ಭಾರತದ್ದೇ ಆಗಿದೆ ಎಂದರು.
ಸೌಹಾರ್ದತೆಯು ಹಿತವಾದ ಸಂಗೀತದಂತೆ ಇರಬೇಕು. ನಾವು ಸಂಯಮ ಕಳೆದುಕೊಂಡರೆ ಏಕಭಾವ ಮೂಡುವುದಿಲ್ಲ. ಎಲ್ಲರೂ ಒಂದೇ ಎನ್ನುವ ಸಮಭಾವವೇ ಸೌಹಾರ್ದತೆ. ದಯೆಯಿದ್ದಲ್ಲಿ ಧರ್ಮವಿರುತ್ತದೆ. ಆಶ್ರಯ ಅರಸಿ ಬಂದ ಹಕ್ಕಿಯನ್ನು ರಕ್ಷಿಸಲು ತನ್ನನ್ನೇ ಅರ್ಪಿಸಿಕೊಂಡ ಶಿಬಿ ಚಕ್ರವರ್ತಿಯ ತ್ಯಾಗ, ದಯೆ ನಮಗೆ ಬರಬೇಕು. ಈ ತ್ಯಾಗ, ಕರುಣೆ, ದಯೆಯಲ್ಲಿಯೇ ಸೌಹಾರ್ದವಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸತ್ಯಸಾಯಿ ಆಶ್ರಮದ ಮಧುಸೂದನ ಸಾಯಿ ಅವರ 14ನೇ ಉಪನ್ಯಾಸದ ‘ಆತ್ಮಾನೊ ಮೋಕ್ಷಂ ಜಗತ್ ಹಿತಾಯಚ’ ಕೃತಿ ಬಿಡುಗಡೆ ಮಾಡಿದರು.