ಎಚ್.ಡಿ.ಕೋಟೆ ತಾಲೂಕಿನ ಜಿನ್ನಹಳ್ಳಿಯಲ್ಲಿ ದುರಂತ
ಎಚ್.ಡಿ.ಕೋಟೆ: ವಿದ್ಯುತ್ ಸ್ಪರ್ಶದಿಂದ ತಾಲೂಕಿನ ಹಂಪಾಪುರ ಗ್ರಾಮ ಪಂಚಾಯಿತಿ ವಾಟರ್‌ಮನ್ ಗುರುವಾರ ಮೃತಪಟ್ಟಿದ್ದಾರೆ.
ತಾಲೂಕಿನ ಜಿನ್ನಹಳ್ಳಿ ಗ್ರಾಮದ ಮಾದೇವಪ್ಪ-ನಂಜಮ್ಮಣಿ ದಂಪತಿ ಪುತ್ರ ವಾಟರ್‌ಮನ್ ಅಜಯ್ (23) ಮೃತಪಟ್ಟವರು. ಗ್ರಾಮದಲ್ಲಿ ಬೋರ್‌ವೆಲ್ ಮೋಟಾರ್ ಕೆಟ್ಟಿತ್ತು. ಹಾಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ದುರಸ್ತಿ ಮಾಡಲು ಎಚ್.ಡಿ.ಕೋಟೆ ಪಟ್ಟಣದ ಗುತ್ತಿಗೆದಾರ ಪುರುಷೋತ್ತಮ್ ಎಂಬುವರಿಗೆ ಸೂಚಿಸಿದ್ದರು ಎನ್ನಲಾಗಿದೆ. ಇದೇ ಗ್ರಾಮದ ವಾಟರ್‌ಮನ್ ಅಜಯ್ ಮತ್ತಿತರರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ ಕಂಬದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಬೋರ್‌ವೆಲ್ ಪೈಪ್ ತಗುಲಿದ ಪರಿಣಾಮ ವಿದ್ಯುತ್ ಸ್ಪರ್ಶಗೊಂಡು ಅಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಚಾರ ತಿಳಿದು ಹಂಪಾಪುರ ಗ್ರಾಪಂ ಪಿಡಿಒ ಸೌಮ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಶುಕ್ರವಾರ ತರಲಾಗಿತ್ತು. ಈ ನಡುವೆ ಗ್ರಾಮಸ್ಥರು, ರೈತ ಮುಖಂಡರು ಆಸ್ಪತ್ರೆ ಮುಂದೆ ಜಮಾಯಿಸಿ ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಬಂದ ಅಧಿಕಾರಿಗಳು, ಗ್ರಾಮಸ್ಥರು, ಮುಖಂಡರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡುವ ಭರವಸೆಯನ್ನ ಅಧಿಕಾರಿಗಳು ನೀಡಿದರು. ನಂದರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಬಳಿಕ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ನೌಕರಿ ನೀಡಲು ಒತ್ತಾಯ: ಗ್ರಾಮದಲ್ಲಿ ವಾಟರ್ ಟ್ಯಾಂಕ್ ನಿರ್ಮಾಣ ಮಾಡಲು ಮೃತ ಅಜಯ್ ಕುಟುಂಬದವರು ಗ್ರಾಮ ಪಂಚಾಯಿತಿಗೆ ಉಚಿತವಾಗಿ ನಿವೇಶನ ನೀಡಿದ್ದರು. ನಿವೇಶನ ಕೊಟ್ಟಿದ್ದಕ್ಕೆ ಮಕ್ಕಳಿಗೆ ಪಂಚಾಯಿತಿಯಲ್ಲಿ ಒಂದು ಕೆಲಸ ಕೊಡಿ ಎಂದು ಮನವಿ ಮಾಡಿಕೊಂಡಿದ್ದರಿಂದ ಅಜಯ್‌ಗೆ ಗುತ್ತಿಗೆ ಆಧಾರದ ಮೇಲೆ ವಾಟರ್‌ಮನ್ ಕೆಲಸ ನೀಡಲಾಗಿತ್ತು. ಆದರೆ ಅಜಯ್ ಇದೀಗ ಅಕಾಲಿಕ ಮರಣ ಹೊಂದಿರುವುದರಿಂದ ಕುಟುಂಬಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಕುಟುಂಬದ ಒಬ್ಬ ಸದಸ್ಯರಿಗೆ ಪಂಚಾಯಿತಿಯಲ್ಲಿ ಕೆಲಸ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.