ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ‘ವಿಶ್ವಜಲ ದಿನ’ವನ್ನು ಪ್ರೊ. ಶ್ಯಾಮಸುಂದರ್ ಉದ್ಘಾಟಿಸಿದರು. ಡಾ.ರೇಚಣ್ಣ, ಪ್ರಸಾದ್, ಎಂ.ಎಂ. ಸ್ವಾಮಿ, ಅನಘಾ ಭಟ್, ಎಂ.ಲಿಖಿತಾ, ಎಂ.ಜೆ. ಚಂದನಾ, ಆರ್.ಪಿ. ಸೃಷ್ಟಿ ಇತರರು ಇದ್ದರು.
- ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಪರಿಶುದ್ಧ ನೀರು ನೀಡುವುದು ಇಂದಿನ ದಿನದಲ್ಲಿ ಸವಾಲಿನ ಕೆಲಸವಾಗಿದೆ
- ನೀರು ವ್ಯರ್ಥವಾಗುವುದನ್ನು ತಡೆಯುವುದರ ಮೂಲಕ ಜಲ ಸಂರಕ್ಷಣೆಗೆ ಕೈಜೋಡಿಸಬೇಕಿದೆ
ಮೈಸೂರು:ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಪರಿಶುದ್ಧ ನೀರನ್ನು ಒದಗಿಸಲು ಜಲ ಸಂರಕ್ಷಣೆಯೊಂದೇ ಮಾರ್ಗ ಎಂದು ಎನ್‌ಐಇ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಶ್ಯಾಮಸುಂದರ್ ಅಭಿಪ್ರಾಯಪಟ್ಟರು.
ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ‘ವಿಶ್ವಜಲ ದಿನ’ ಪ್ರಯುಕ್ತ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ‘ಭವಿಷ್ಯದ ಸುಸ್ಥಿರತೆಗಾಗಿ ನೀರಿನ ಸಂರಕ್ಷಣೆ’ ವಿಷಯ ಕುರಿತು ಮಾತನಾಡಿದರು.
ಮನುಷ್ಯರು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ನೀರು ಅತ್ಯಗತ್ಯವಾಗಿದೆ. ಆದರೆ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಪರಿಶುದ್ಧ ನೀರು ನೀಡುವುದು ಇಂದಿನ ದಿನದಲ್ಲಿ ಸವಾಲಿನ ಕೆಲಸವಾಗಿದೆ. ಆದ್ದರಿಂದ ನೀರಿನ ಸುಸ್ಥಿರತೆಗಾಗಿ ಮಳೆ ನೀರಿನ ಪ್ರತಿ ಹನಿಯ ರಕ್ಷಣೆ ಅಗತ್ಯ ಎಂದು ಹೇಳಿದರು.
ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ನೀರು ವ್ಯರ್ಥವಾಗುವುದನ್ನು ತಡೆಯುವುದರ ಮೂಲಕ ಜಲ ಸಂರಕ್ಷಣೆಗೆ ಕೈಜೋಡಿಸಬೇಕಿದೆ. ಮೈಸೂರು ನಗರದಲ್ಲಿ ವಾರ್ಷಿಕ 800 ಮಿ.ಮೀ. ಮಳೆಯಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ಮಳೆ ನೀರಿನ ಕೊಯ್ಲು ಮಾಡಿದರೆ ಸರಾಸರಿ ಪ್ರತಿ ಮನೆಯಲ್ಲಿ 80 ಸಾವಿರ ಲೀ. ನೀರು ಸಂಗ್ರಹವಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ನೀರಿಗೆ ಹೆಚ್ಚು ತೊಂದರೆಯಾಗುವುದಿಲ್ಲ ಎಂದರು.
ನಗರದ ಸುತ್ತಮುತ್ತಲಿನ ಕೆರೆಗಳು ಹೆಚ್ಚು ಕಲುಷಿತಗೊಂಡಿದ್ದು, ಇಂತಹ ನೀರು ಕೆರೆಗಳಿಗೆ ಸೇರ್ಪಡೆಯಾಗುವುದನ್ನು ತಪ್ಪಿಸಿ ಮಳೆ ನೀರನ್ನು ಕೆರೆಗಳಿಗೆ ಸೇರಿಸಿದರೆ ಅಂತರ್ಜಲವನ್ನು ಕಾಪಾಡುವುದರ ಜತೆಗೆ ಪರಿಸರವನ್ನು ಸ್ವಚ್ಛವಾಗಿಡುವುದಕ್ಕೆ ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿನಿಯರು ವಿಶ್ವ ಜಲ ದಿನದ ಪ್ರಯುಕ್ತ ಜಲ ಸಂರಕ್ಷಣೆ ಕುರಿತ ಭಿತ್ತಿಚಿತ್ರಗಳ ತಯಾರಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಗಣ್ಯರು ಪ್ರದರ್ಶನವನ್ನು ವೀಕ್ಷಿಸಿದರು.
ಪ್ರಾಂಶುಪಾಲ ಡಾ.ರೇಚಣ್ಣ ಅಧ್ಯಕ್ಷತಗೆ ವಹಿಸಿದ್ದರು. ಕ್ರೈಸ್ಟ್ ಎನ್‌ಐಇ ಮುಖ್ಯ ಕಾರ್ಯನಿರ್ವಾಹಕ ಪ್ರಸಾದ್, ವಿಭಾಗದ ಮುಖ್ಯಸ್ಥ ಎಂ.ಎಂ. ಸ್ವಾಮಿ, ವಿದ್ಯಾರ್ಥಿನಿಯರಾದ ಅನಘಾ ಭಟ್, ಎಂ.ಲಿಖಿತಾ, ಎಂ.ಜೆ. ಚಂದನಾ, ಆರ್.ಪಿ.ಸೃಷ್ಟಿ ಇತರರು ಇದ್ದರು.