ರಘು ಕೌಟಿಲ್ಯ  
ಮೈಸೂರು

ಹಿಂದುಳಿದ ವರ್ಗಗಳ ಹೆಸರಿನಲ್ಲಿ ಹಣ ಪೋಲು

ಪ್ರಮುಖ ಮುಖ್ಯಾಂಶಗಳು

  • ಎಂಎಲ್ಸಿ ರಘು ಕೌಟಿಲ್ಯ ಅಸಮಾಧಾನ
  • ನಿರ್ದಿಷ್ಟ ಸಮುದಾಯಗಳಿಗೆ ಸಿಗದ ಸಾಮಾಜಿಕ ನ್ಯಾಯ
ಪಿರಿಯಾಪಟ್ಟಣ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಜನರ ತೆರಿಗೆ ಹಣ ಪೋಲು ಮಾಡಲಾಗಿದೆಯೇ ಹೊರತು, ಸಮುದಾಯಗಳಿಗೆ ಯಾವುದೇ ನೈಜ ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಹಿಂದುಳಿದ ವರ್ಗಗಳ ನಿರ್ಲಕ್ಷ್ಯದ ವಿರುದ್ಧ ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು. ಹಿಂದುಳಿದ ವರ್ಗಗಳ ಸಂಪೂರ್ಣ ಬೆಂಬಲವನ್ನು ಕ್ರೋಡೀಕರಿಸುವ ಹಾಗೂ ಸಮುದಾಯಗಳಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಸಂಕಲ್ಪದೊಂದಿಗೆ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಹಿಂದುಳಿದ ವರ್ಗಗಳಿಗೆ ಆಗಿರುವ ಸಾಮಾಜಿಕ ನ್ಯಾಯದ ಅಸಮತೋಲನವನ್ನು ಹೋಗಲಾಡಿಸಲು ಅವರ ಧ್ವನಿಯಾಗಿ ವಿಧಾನಪರಿಷತ್ತಿನ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದ್ದೇನೆ. ಪ್ರತಿ 10 ವರ್ಷಕ್ಕೊಮ್ಮೆ ಜಾತಿಗಳ ಸಾಮಾಜಿಕ ಗಣತಿಯಾಗಬೇಕು. ಆದರೆ ಇಂದಿನವರೆಗೆ ನಡೆದಿರುವ ಸಮೀಕ್ಷಾ ಕಾರ್ಯ ದೋಷಪೂರಿತವಾಗಿದೆ ಎಂದರು.
ಕಾಂತರಾಜು ವರದಿ ಯಾವುದಕ್ಕಾಗಿ ಇದೆ ಎಂದು ಜನರಿಗೆ ಇಂದಿಗೂ ತಿಳಿಯದಂತಾಗಿದೆ. 165 ಕೋಟಿ ರೂ. ವೆಚ್ಚದ ಈ ವರದಿ ನೀರಲ್ಲಿ ಹೋಮ ಮಾಡಿದಂತಾಗಿದೆ. ತದನಂತರ ಮುಖ್ಯಮಂತ್ರಿಗಳು ತಮ್ಮ ರಾಜೀನಾಮೆಯ ಹಿಂದಿನ ದಿನ ತರಾತುರಿಯಲ್ಲಿ ಮಧುಸೂದನ್ ನಾಯಕ್ ಸಮಿತಿಯ ವರದಿಯನ್ನು ಸ್ವೀಕರಿಸಿದರು. ಅಷ್ಟೊಂದು ತರಾತುರಿಯ ಅವಶ್ಯಕತೆ ಏನಿತ್ತು? ಆದರೂ ಸಿದ್ದರಾಮಯ್ಯ ಅವರು ಈ ಸಮೀಕ್ಷಾ ವರದಿಯನ್ನು ಬಹಿರಂಗಪಡಿಸಲಿಲ್ಲ ಎಂದರು.
ಹಿಂದುಳಿದ ವರ್ಗಗಳ ಬಗ್ಗೆ ದೊಡ್ಡ ಘೋಷಣೆಗಳನ್ನು ಮಾಡಿ ಅಧಿಕಾರ ಅನುಭವಿಸಿದರೇ ಹೊರತು, ಯಾವುದೇ ಕಲ್ಯಾಣ ಕಾರ್ಯಕ್ರಮ ಮಾಡಲಿಲ್ಲ. ಮಧುಸೂದನ್ ನಾಯಕ್ ಅವರ ವರದಿ ಬಿಡುಗಡೆ ಮಾಡುವ ಬದ್ಧತೆಯನ್ನೂ ತೋರಲಿಲ್ಲ. ಒಟ್ಟಾರೆಯಾಗಿ ಸಾಮಾಜಿಕ ಸಮೀಕ್ಷಾ ಕಾರ್ಯಕ್ಕೆ ಇದುವರೆಗೆ ಬರೋಬ್ಬರಿ 650 ಕೋಟಿ ರೂಪಾಯಿ (435 ಕೋಟಿ ರೂ. ಹಾಗೂ 165 ಕೋಟಿ ರೂ.) ವಿನಿಯೋಗಿಸಲಾಗಿದ್ದು, ಜನರ ತೆರಿಗೆ ಹಣ ಸಂಪೂರ್ಣ ಪೋಲಾಗಿದೆ. ಪ್ರಸ್ತುತ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ತಕ್ಷಣವೇ ಈ ವರದಿಯನ್ನು ಅನಾವರಣಗೊಳಿಸಬೇಕು, ಇಲ್ಲದಿದ್ದರೆ ಹಿಂದುಳಿದ ವರ್ಗಗಳ ಸಮುದಾಯಗಳು ಜಾಗೃತವಾಗಿ ಉಗ್ರ ಹೋರಾಟ ನಡೆಸಲಿವೆ ಎಂದು ಎಚ್ಚರಿಸಿದರು.
ರೈತರಿಗೆ ‘ಬೆಳೆ ಬೆಳೆಯಬೇಡಿ’ ಎಂದು ಹೇಳಿದ ಉದಾಹರಣೆ ಇದ್ದರೆ ಅದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತ್ರ. ಇದು ಅತ್ಯಂತ ದುರಂತ ಹಾಗೂ ರೈತರಿಗೆ ಬಗೆದ ಅನ್ಯಾಯ. ರಾಜ್ಯದಲ್ಲಿ ಇಂದು ಎಲ್ಲ ಸಮುದಾಯಗಳೂ ಸಂಕಷ್ಟದಲ್ಲಿವೆ ಎಂದು ಆಕ್ರೋಶ ಹೊರಹಾಕಿದರು.
ಗ್ಯಾರಂಟಿ ಹೆಸರಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ತಂದು, ಅವುಗಳನ್ನು ಜನರಿಗೆ ಸರಿಯಾಗಿ ತಲುಪಿಸದೆ ಪರಿಷ್ಕರಣೆಯ ನೆಪದಲ್ಲಿ ಅರ್ಹರಿಗೆ ಮಾತ್ರ ಕೊಡುತ್ತೇವೆ ಎನ್ನುತ್ತಿದ್ದಾರೆ. ಇದು ಕೇವಲ ಚುನಾವಣೆ ಮುಗಿಯುವವರೆಗೆ ಜನರ ಮೂಗಿಗೆ ತುಪ್ಪ ಸವರಿ, ಗ್ಯಾರಂಟಿಗಳಿಗೆ ತಿಲಾಂಜಲಿ ಕೊಡುವ ಹುನ್ನಾರವಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೂ ಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ. ಕೇವಲ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಿ, ಅವರಿಗೆ ಸಂಬಳ ನೀಡಲು ಈ ಸಮಿತಿಗಳನ್ನು ರಚಿಸಲಾಗಿದ್ದು, ಇದರ ಮೂಲಕವೂ ಸರ್ಕಾರದ ಹಣ ವ್ಯಯಿಸಲಾಗುತ್ತಿದೆ ಎಂದು ದೂರಿದರು.
ಗೊಂದಲದಲ್ಲೇ ಕಾಲ ಕಳೆದ ಸರ್ಕಾರ: ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ, ಒಬಿಸಿ ಜಿಲ್ಲಾ ಅಧ್ಯಕ್ಷ ರಾಜೇಗೌಡ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷ ನಳಿನಿ ಗೌಡ, ಒಬಿಸಿ ತಾಲೂಕು ಅಧ್ಯಕ್ಷ ಲೋಕಪಾಲಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಚನ್ನಬಸಪ್ಪ, ರವಿ, ನಗರ ಘಟಕ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ದೇವೇಂದ್ರ, ಮುಖಂಡರಾದ ಸತೀಶ್, ಪ್ರಸನ್ನ, ಅಶೋಕ್, ಮದನ್ ಗೋಪಾಲ್ ಅರಸು, ವೀರಭದ್ರ ಹಾಜರಿದ್ದರು.