ಕೇರಳದ ವಯನಾಡ್ ಜಿಲ್ಲೆ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕಬಿನಿ ಜಲಾಶಯಕ್ಕೆ ನೀರಿನ ಒಳ ಹರಿವಿನ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಕಳೆದ ಐದಾರು ದಿನಗಳಿಂದ ಕೇರಳದಲ್ಲಿ ಬೀಳುತ್ತಿರುವ ಮಳೆಗೆ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಜನರು ಮಳೆ ಹಾನಿಗೆ ಒಳಗಾದರೆ, ಕಬಿನಿ ಜಲಾಶಯದ ನದಿ ಪಾತ್ರದ ಜನರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.
ದಿನದಿಂದ ದಿನಕ್ಕೆ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮಂಗಳವಾರ ಸಂಜೆಗೆ 27 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಅಣೆಕಟ್ಟು ಭದ್ರತಾ ದೃಷ್ಟಿಯಿಂದ ಜಲಾಶಯದಲ್ಲಿ ಸರಾಸರಿ ಪ್ರಮಾಣ ಕಾಯ್ದುಕೊಂಡು ಬಂದಷ್ಟು ನೀರನ್ನು ನದಿಗೆ ಬಿಡಲಾಗಿದೆ. ಈಗಾಗಲೇ ಜಲಾಶಯದ ಮುಂಭಾಗದ ಸೇತುವೆ ಮೂರನೇ ದಿನವೂ ಮುಳುಗಡೆಯಾಗಿ ಗ್ರಾಮ ಸಂಪರ್ಕ ಕಳೆದುಕೊಂಡಿದೆ. ಇದರಿಂದ ಹತ್ತಾರು ಗ್ರಾಮಗಳಿಗೆ ವಾಹನ ಸಂಚಾರ ಪರ್ಯಾಯ ಮಾರ್ಗವಾಗಿ ಸಂಚರಿಸುವಂತಾಗಿದೆ.
ಕೇರಳದಲ್ಲಿ ಜೋರು ಮಳೆ ಆಗುತ್ತಿದ್ದು, ವಯನಾಡ್ ಜಿಲ್ಲೆ ಸೇರಿದಂತೆ ಇತರೆಡೆ ರೆಡ್‌ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುವ ನಿರೀಕ್ಷೆ ಇದೆ ಎಂದು ನೀರಾವರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.