ಮೈಸೂರಿನ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ನಗರದ ಮಹಾಜನ ಸ್ನಾತಕೋತರ ಕೇಂದ್ರದ ನಿರ್ದೇಶಕ ಡಾ. ಸಿ. ಕೆ. ರೇಣುಕಾರ್ಯ ಉದ್ಘಾಟಿಸಿದರು. ಪ್ರೊ.ಮೊರಬದ ಮಲ್ಲಿಕಾರ್ಜುನ, ಡಾ. ನಮಿತಾ ತಿಮ್ಮಯ್ಯ, ಡಾ. ರೇಚಣ್ಣ, ಡಾ.ರೂಪಾ ಇದ್ದರು. 
ಮೈಸೂರು

ದೇಶದ ಅಭಿವೃದ್ಧಿಗೆ ಯುದ್ಧ ಮಾರಕ : ಡಾ.ಸಿ.ಕೆ. ರೇಣುಕಾರ್ಯ

ಮೈಸೂರು: ದೇಶದ ಅಭಿವೃದ್ಧಿಗೆ ಯುದ್ಧ ಮಾರಕವಾಗಿದ್ದು, ವಿವೇಚನೆ ಮತ್ತು ಬುದ್ಧಿವಂತಿಕೆಯ ಕೊರತೆಯಿಂದ ಜಗತ್ತು ದುರಂತದತ್ತ ಸಾಗುತ್ತಿದೆ ಎಂದು ನಗರದ ಮಹಾಜನ ಸ್ನಾತಕೋತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ. ರೇಣುಕಾರ್ಯ ಕಳವಳ ವ್ಯಕ್ತಪಡಿಸಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ದೇಶಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಪಟ್ಟರೆ ಹಿಂದಿನ ವಸಹಾತು ಶಾಹಿಯತ್ತ ಹೋಗಬೇಕಾಗುತ್ತದೆ. ಆತ್ಮ ನಿರ್ಭರ ರಾಷ್ಟ್ರವಾಗಿ ಬೆಳೆಯಲು ಇಂದಿನ ಸ್ಥಿತಿಯು ಮಾರಕವಾಗಿದೆ ಎಂದರು.
ತೈಲಕ್ಕಾಗಿ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿರುವುದರ ಪರಿಣಾಮ ಇಂದಿನ ಯುದ್ಧ ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಿದೆ. ಸಾಮಾನ್ಯ ಜನರ ಮೇಲೆ, ಕೈಗಾರಿಕೆಗಳ ಮೇಲೆ, ರೈತರ ಮೇಲೆ, ಇಂದಿನ ಯುದ್ಧವು ದುಷ್ಪರಿಣಾಮ ಉಂಟು ಮಾಡಿದೆ ಎಂದು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಇಂದಿನ ಯುದ್ಧದ ಪರಿಸ್ಥಿತಿ ಕೇವಲ ಆರ್ಥಿಕತೆಗೆ ಮಾತ್ರ ಸೀಮಿತವಾಗಿಲ್ಲ, ದೇಶದ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಜಾಗತಿಕ ನಾಯಕರು ವಿವೇಕದಿಂದ ವರ್ತಿಸಿದರೆ ಯುದ್ಧವನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.
ಜಗತ್ತಿನ ಸಂಪನ್ಮೂಲಗಳ ಮೇಲೆ ಹಕ್ಕು ಸ್ಥಾಪಿಸಬೇಕೆಂಬ ಅವಿವೇಕತನದಿಂದ ಪ್ರಸ್ತುತ ಈ ಸ್ಥಿತಿ ಬಂದಿದೆ. ಆದ್ದರಿಂದ ಸಕಾರಾತ್ಮಕ ಆಲೋಚನಾ ಶಕ್ತಿಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ನನ್ನ ನಾಡು, ನನ್ನ ದೇಶ, ನನ್ನ ಪ್ರಪಂಚ ಎಂಬ ಭಾವನೆ ಇದ್ದರೆ ಜಗತ್ತಿನಲ್ಲಿ ಶಾಂತಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ನಮಿತಾ ತಿಮ್ಮಯ್ಯ ‘ಇಂಧನ ಆಘಾತದಿಂದ ರಫ್ತು ಆಘಾತದವರೆಗೆ: ಇರಾನ್ - ಇಸ್ರೇಲ್ ಸಂಘರ್ಷಕ್ಕೆ ಭಾರತದ ವ್ಯಾಪಾರ ಪ್ರತಿಕ್ರಿಯೆ’ ವಿಷಯದ ಕುರಿತು, ನಿವೃತ್ತ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ ಟಿ.ಎನ್. ವೇಣುಗೋಪಾಲ್ ‘ಇರಾನ್ ವಿರುದ್ಧದ ಯುದ್ಧದ ಪರಿಣಾಮ ಅರ್ಥ ಮಾಡಿಕೊಳ್ಳುವುದು’ ವಿಷಯದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಪ್ರಾಚಾರ್ಯ ಡಾ. ರೇಚಣ್ಣ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರೂಪಾ ಇದ್ದರು.