‘ಪ್ರಸಾದ್’ ಯೋಜನೆಯಡಿ ಚಾಮುಂಡಿಬೆಟ್ಟದ ಮೇಲೆ ಕೈಗೊಂಡಿರುವ ಕಾಮಗಾರಿ ವಿರೋಧಿಸಿ ‘ಪರಿಸರಕ್ಕಾಗಿ ನಾವು’ ಬಳಗದ ವತಿಯಿಂದ ‘ಚಾಮುಂಡಿ ಬೆಟ್ಟದ ಸಂರಕ್ಷಣೆಗಾಗಿ ನಡಿಗೆ’ ನಡೆಯಿತು. ಪ್ರಮೋದಾದೇವಿ ಒಡೆಯರ್, ಭಾಮಿ ವಿ.ಶೆಣೈ, ಪ್ರೊ.ರಂಗರಾಜು, ಧರ್ಮೇಂದ್ರ ಇನ್ನಿತರರಿದ್ದರು 
ಮೈಸೂರು

ಪ್ರಸಾದ್’ ಯೋಜನೆ ವಿರೋಧಿಸಿ ‘ಚಾಮುಂಡಿಬೆಟ್ಟದ ಸಂರಕ್ಷಣೆಗಾಗಿ ನಡಿಗೆ’ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ‘ಪರಿಸರಕ್ಕಾಗಿ ನಾವು’ ಬಳಗದಿಂದ ಪ್ರತಿಭಟನೆ
  • ಚಾಮುಂಡಿಬೆಟ್ಟದ ಮೇಲೆ ಕೈಗೊಂಡಿರುವ ಕಾಮಗಾರಿಗೆ ವಿರೋಧ
  • ಚಾಮುಂಡಿಬೆಟ್ಟವನ್ನು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಪರಂಪರೆ ತಾಣವಾಗಿಯೇ ಉಳಿಸಿ
ಮೈಸೂರು: ಕೇಂದ್ರ ಸರ್ಕಾರದ ‘ಪ್ರಸಾದ್’ ಯೋಜನೆಯಡಿ ಚಾಮುಂಡಿಬೆಟ್ಟದ ಮೇಲೆ ಕೈಗೊಂಡಿರುವ ಕಾಮಗಾರಿಯನ್ನು ವಿರೋಧಿಸಿ ‘ಪರಿಸರಕ್ಕಾಗಿ ನಾವು’ ಬಳಗದ ವತಿಯಿಂದ ಭಾನುವಾರ ‘ಚಾಮುಂಡಿಬೆಟ್ಟದ ಸಂರಕ್ಷಣೆಗಾಗಿ ನಡಿಗೆ’ ಕೈಗೊಳ್ಳುವ ಮೂಲಕ ಪ್ರತಿಭಟನೆಯನ್ನು ದಾಖಲಿಸಲಾಯಿತು.
ಪರಿಸರ ಪ್ರೇಮಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಮಕ್ಕಳು ಮೆಟ್ಟಿಲು ಹತ್ತಿ ಚಾಮುಂಡಿಬೆಟ್ಟ ಉಳಿಸುವಂತೆ ಆಗ್ರಹಿಸಿದರು.
 ‘ಪರಿಸರ ಸ್ನೇಹಿ ಅಭಿವೃದ್ಧಿ ಬೇಕು’, ವಿನಾಶದ ಅಭಿವೃದ್ಧಿ ಸಾಕು’, ‘ಬೇಡವೇ ಬೇಡ ಬೆಟ್ಟವು ಕಾಂಕ್ರೀಟ್ ಕಾಡಾಗುವುದು ಬೇಡ’, ‘ಅಭಿವೃದ್ಧಿ ಮೇಲಕ್ಕೆ ಪರಿಸರ ಪಾತಾಳಕ್ಕೆ’, ‘ಬೆಟ್ಟದ ಮೇಲೆ ಅತಿ ನಿರ್ಮಾಣ ಭೂಕುಸಿತಕ್ಕೆ ಕಾರಣ’ ಎಂಬ ನಾಮಫಲಕ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
 ಚಾಮುಂಡಿಬೆಟ್ಟವನ್ನು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಪರಂಪರೆ ತಾಣವಾಗಿಯೇ ಉಳಿಸಿಕೊಳ್ಳಬೇಕು ಎಂದೂ ಒತ್ತಾಯಿಸಿದರು.
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ಚಾಮುಂಡಿಬೆಟ್ಟದಲ್ಲಿ ಈಗಾಗಲೇ ಸಾಕಷ್ಟು ಕಟ್ಟಡಗಳು ನಿರ್ಮಾಣವಾಗಿದೆ. ತುರ್ತು ಸಂದರ್ಭಕ್ಕೆ ಬೇಕಿರುವ ಆರೋಗ್ಯ ಕೇಂದ್ರ ಸ್ಥಾಪಿಸಿ, ಅದನ್ನು ಬಿಟ್ಟು ಬೇರೆ ಕಟ್ಟಡಗಳು ಅನಗತ್ಯವಾಗಿದೆ. ಜನರ ಭಾವನೆಯೂ ಅದೇ ಆಗಿದೆ. ಕಾಮಗಾರಿ ತಡೆಗಾಗಿ ಕಾನೂನು ಹೋರಾಟ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾಮಗಾರಿ ತಡೆಗೆ ಸರ್ಕಾರದ ಗಮನಕ್ಕೆ ತರಲಾಯಿತು. ಅದಕ್ಕೆ ಪ್ರತಿಕ್ರಿಯೆ ಬರದಿದ್ದರಿಂದ ನ್ಯಾಯಾಲಯದ ಮೊರೆ ಹೋಗಲಾಗಿದೆ. ಚಾಮುಂಡಮ್ಮನ ಬಳಿ ಕೇಳಿಕೊಂಡಿದ್ದು, ಸರ್ಕಾರಕ್ಕೆ ದೇವರೇ ಪ್ರೇರಣೆ ನೀಡಿ ಕಾಮಗಾರಿ ನಿಲ್ಲಿಸಲಿ. ಕಡೆಯದಾಗಿ ನಮ ಕೈಯಲ್ಲಿ ಎಷ್ಟು ಆಗುತ್ತದೆ ಅಷ್ಟು ಮಾಡೋಣ. ಅಂತಿಮವಾಗಿ ಚಾಮುಂಡೇಶ್ವರಿಯೇ ಪ್ರೇರಣೆ ನೀಡಬೇಕು ಎಂದರು.
ಬೆಟ್ಟ ಉಳಿಸಬೇಕಿರುವುದು ಎಲ್ಲರ ಆದ್ಯಕರ್ತವ್ಯ. ನಮ್ಮ ಕುಟುಂಬದಿಂದ ವೈಯಕ್ತಿಕವಾಗಿ ಕಳೆದ  30 ವರ್ಷದಿಂದ ಹೋರಾಟ  ಮಾಡುತ್ತಿದ್ದು, ಇಷ್ಟು ದಿನ ಅದು ವೈಯಕ್ತಿಕವಾಗಿ ಮಾತ್ರ ಇತ್ತು. ಈಗ ಜನರಿಗೆ ತಲುಪಿದ್ದು, ಜನರು ಸಹ ನಮ್ಮೊಟ್ಟಿಗೆ ಸೇರಿದ್ದಾರೆ. ಇದನ್ನು ಬೆಟ್ಟವಾಗಿ ಉಳಿದುಕೊಳ್ಳಲಿ ಎಂಬುದೇ ನಮ್ಮೆಲ್ಲ ಆಶಯವಾಗಿದೆ ಎಂದರು.
ಬೆಟ್ಟದ ಮೇಲ್ಭಾಗದಲ್ಲಿ ಕಾಂಕ್ರಿಟೀಕರಣ ಮಾಡುವ ಅಗತ್ಯ ಇಲ್ಲ. ಭಕ್ತರಿಗೆ ಬೇಕಿರುವ ಕುಡಿಯುವ ನೀರು, ಶೌಚಗೃಹ, ಹಿರಿಯ ನಾಗರಿಕರಿಗೆ ಸೌಲಭ್ಯ ನೀಡುವುದಕ್ಕೆ ಯಾರಿಗೂ ಆಕ್ಷೇಪವಿಲ್ಲ. ಮೂಲ ಸೌಕರ್ಯ ಸೌಲಭ್ಯವನ್ನು ಒದಗಿಸಬೇಕು. ಆದರೆ, ದೇವಸ್ಥಾನದ ಪಕ್ಕದಲ್ಲೇ ಕಾಮಗಾರಿ ಕೈಗೊಂಡಿರುವುದು ಸರಿಯಲ್ಲ. ಇದರಿಂದ ರಥೋತ್ಸವ ಸಾಗಲು ಅಡೆತಡೆಯಾಗಲಿದೆ. ಜನರಿಗೂ ತೊಂದರೆಯಾಗಲಿದೆ ಎಂದು ಕಿಡಿಕಾರಿದರು.
ಜನರು ಚಾಮುಂಡಿಬೆಟ್ಟ ಬರುವುದೇ ಚಾಮುಂಡೇಶ್ವರಿದೇವಿ ದರ್ಶನ ಪಡೆಯುವುದಕ್ಕಾಗಿ. ಅವರಿಗೆ ಕಟ್ಟಡ ನಿರ್ಮಾಣ ಬೇಕಿಲ್ಲ. ಹೀಗೆ ಮಾಡಿದರೆ ಉತ್ಸವಕ್ಕೂ ಅಡ್ಡಿಯಾಗುತ್ತದೆಂಬ ಭಾವನೆ ಇದೆ. ಕಾಮಗಾರಿಯ ಯೋಜನೆ ನೋಡಿದರೆ ಅದು ತಾತ್ಕಾಲಿಕ ಎಂದು ಅನಿಸುತ್ತಿಲ್ಲ. ಬೆಟ್ಟಕ್ಕೂ ಹಾನಿಯಾಗುತ್ತದೆ. ಈಗಾಗಲೇ ನಂದಿ ಮಾರ್ಗದ ರಸ್ತೆ ಕುಸಿದು 4 ವರ್ಷಗಳಾಗಿದೆ. ಇದೀಗ ತಾತ್ಕಾಲಿಕವಾಗಿ ರಸ್ತೆ ತೆರೆಯಲಾಗಿದೆ. ಅದನ್ನು ಸರಿಪಡಿಸಲು ಇಷ್ಟು ವರ್ಷ ಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಬೆಟ್ಟದಲ್ಲಿ ವಾಹನಗಳ ಪಾರ್ಕಿಂಗ್ ಕಾಮಗಾರಿ ಮಾಡಿದ್ದಾಗ ರಾಜೇಂದ್ರ ವಿಲಾಸ್ ಅರಮನೆಗೂ ಹಾನಿಯಾಗಿದೆ. ಗಾಳಿ ಸಮಸ್ಯೆಯಿಂದ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಮತ್ತೆ ಗುಮ್ಮಟ ಕಾಮಗಾರಿಯನ್ನು ನಡೆಸಲು ಕಷ್ಟವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. 
ನಡಿಗೆಯಲ್ಲಿ ಶಾಸಕ ದರ್ಶನ್ ಪುಟ್ಟಣಯ್ಯ, ಮೇಜರ್ ಜನರಲ್ ಒಂಬತ್ಕೆರೆ, ಗ್ರಾಹಕ ಪರಿಷತ್ ಸಂಸ್ಥಾಪಕ ಭಾಮಿ ವಿ.ಶೆಣೈ, ಇತಿಹಾಸ ತಜ್ಞ ಪ್ರೊ.ರಂಗರಾಜು, ಧರ್ಮೇಂದ್ರ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
"

ನಾನು ಯಾವುದೇ ಪಕ್ಷದ ಸದಸ್ಯೆಯಲ್ಲ. ನನ್ನ ಪತಿ ಶ್ರೀಕಂಠದತ್ತ ಚಾಮರಾಜ ಒಡೆಯರ್ ಕಾಂಗ್ರೆಸ್‌ನಲ್ಲಿದ್ದರು. ಈಗ ಮಗ ಯದುವೀರ್ ಕೃಷ್ಣದತ್ತ ಒಡೆಯರ್ ಬಿಜೆಪಿಯಲ್ಲಿ ಇದ್ದಾರೆ. ನಾನು ಎರಡೂ ಪಕ್ಷದ ಸದಸ್ಯೆ ಆಗಿಲ್ಲ. ಆ ರೀತಿ ಭಾವನೆ ಇಟ್ಟುಕೊಳ್ಳಬೇಡಿ. ನಾನು ಜನರ ಪರ. ಅವರೊಟ್ಟಿಗೆ ಇರುತ್ತೇನೆ. ಯಾವುದೇ ಪಕ್ಷದೊಂದಿಗೆ ಸೇರಿಸಬೇಡಿ. ಜನರೊಟ್ಟಿಗೆ ನನ್ನನ್ನು ಸೇರಿಸಿ.