ಮೈಸೂರು: ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಗೆ ಜಯ ದೊರೆತಿದ್ದು, ಜನರು ನೀಡಿದ ತೀರ್ಪಿಗೆ ಕಾಂಗ್ರೆಸ್ ನಾಯಕರು ತಲೆಬಾಗಿ ರಚನಾತ್ಮಕವಾಗಿ ಕೆಲಸ ಮಾಡಬೇಕು. ರಾಜ್ಯ, ಕೇಂದ್ರ ಸರ್ಕಾರಗಳ ಅಭಿವೃದ್ಧಿಗೆ ಮತದಾರರು ಮಣೆ ಹಾಕಿದ್ದರಿಂದಲೇ ಬಹುಮತ ಬರಲು ಕಾರಣವಾಗಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿ ಏಕನಾಥ್ ಸಿಂಧೆ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರವೂ ಒತ್ತಾಸೆಯಾಗಿದೆ. ಈಗ ಮುಂಬಯಿ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವುದರಿಂದ ತ್ರಿಬಲ್ ಇಂಜಿನ್ ಸರ್ಕಾರವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ. ಚುನಾವಣೆಗಳಲ್ಲಿ ಸೋತರೂ ಇವಿಎಂ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ ನಾಯಕರು ಜನರ ತೀರ್ಪಿಗೆ ತಲೆಬಾಗಬೇಕು. ಮಹಾರಾಷ್ಟ್ರದ ಜನರು ಬುದ್ಧಿವಂತರು. ಕಾಂಗ್ರೆಸ್ ಮಾಡುವ ಆರೋಪವನ್ನು ನಂಬಿ ಕೂರುವವರಲ್ಲ. ಕಾಂಗ್ರೆಸ್ ನಾಯಕರು ಮುಂದಾದರೂ ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು. ಗ್ರೇಟರ್ ಬೆಂಗಳೂರು ನಗರಪಾಲಿಕೆ ಚುನಾವಣೆ ನಡೆಸುವ ಜತೆಗೆ ಇತರೆ ಪಾಲಿಕೆಗಳ ಚುನಾವಣೆ ನಡೆಸಬೇಕು. ರಾಜ್ಯ ಸರ್ಕಾರದ ಕಾರ್ಯ ವೈಖರಿ, ಆಡಳಿತ ನಿರ್ಲಕ್ಷ್ಯ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.