- ಅನಗತ್ಯ, ಆಧಾರ ರಹಿತ ಆರೋಪ ಮಾಡುವ ಮೂಲಕ ಬಿಜೆಪಿ ನಗೆಪಾಟಲಿಗೀಡಾಗಿದೆ
- 6.5 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ಆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ
ಮೈಸೂರು:ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹೆಸರು ಕೈ ಬಿಡದಂತೆ ಕಾಂಗ್ರೆಸ್ ತಡೆಯುತ್ತಿರುವುದರಿಂದ ಬಿಜೆಪಿ ಅನಗತ್ಯ, ಆಧಾರ ರಹಿತ ಆರೋಪ ಮಾಡುವ ಮೂಲಕ ನಗೆಪಾಟಲಿಗೀಡಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.
ದೇಶದ 13 ರಾಜ್ಯಗಳಲ್ಲಿ ಎಸ್‌ಐಆರ್ ಮಾಡಿದ ಕೇಂದ್ರ ಸರ್ಕಾರ 6.5 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ಆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕರ್ನಾಟಕ ರಾಜ್ಯದಲ್ಲೂ ಒಂದು ಕೋಟಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಬಿಜೆಪಿ ಯತ್ನಿಸಿದೆ. ಆದರೆ ಅದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡದೆ ಪ್ರತಿ ಮತದಾರನ ಬಳಿಗೆ ಹೋಗಿ, ಅರ್ಜಿ ಭರ್ತಿ ಮಾಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಅರ್ಹ ಮತದಾರ ಹೆಸರು ಪಟ್ಟಿಯಿಂದ ಹೊರಗುಳಿಯದಂತೆ ಕಾಂಗ್ರೆಸ್ ನೋಡಿಕೊಳ್ಳುತ್ತಿರುವುದನ್ನು ಸಹಿಸದ ಬಿಜೆಪಿ ಕಳೆದ ಎರಡು ದಿನಗಳಿಂದ ಆಧಾರ ರಹಿತ ಹಾಗೂ ಅನಗತ್ಯ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟದಲ್ಲಿ 5 ಕೋಟಿ 60 ಲಕ್ಷ ಮತದಾರರಿದ್ದು, ಎಸ್‌ಐಆರ್ ಮ್ಯಾಪಿಂಗ್ ವೇಳೆ 50 ಲಕ್ಷ ಮತದಾರರನ್ನು ಈಗಾಗಲೇ ಹೊರಗಿಟ್ಟಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಇನ್ನೂ 60 ಲಕ್ಷ ಮತದಾರರನ್ನು ಕೈಬಿಡುವ ಹುನ್ನಾರವನ್ನು ಕೇಂದ್ರ ಬಿಜೆಪಿ ಸರ್ಕಾರ ನಡೆಸಿದೆ ಎಂದು ಆರೋಪಿಸಿದರು.
ದೇಶದಲ್ಲಿ ಮೂರು ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದ ಕಾಂಗ್ರೆಸ್, ಮತದಾರ ಪಟ್ಟಿಯಿಂದ ದೂರ ಉಳಿದಿದ್ದ ಅರ್ಹರನ್ನು ಪಟ್ಟಿಗೆ ಸೇರಿಸುವ ಕೆಲಸ ಮಾಡಿತ್ತು. ಆದರೆ ಬಿಜೆಪಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅರ್ಹರನ್ನೂ ಮತದಾರ ಪಟ್ಟಿಯಿಂದ ದೂರವಿಡುವ ಕೆಲಸ ಮಾಡುತ್ತಿದೆ. ಜತೆಗೆ ಈ ಪ್ರಕ್ರಿಯೆಗೆ ನೀಡುತ್ತಿರುವ ಎನ್ಯುಮರೇಷನ್ ಅರ್ಜಿಯೂ ಹಲವು ಲೋಪಗಳಿಂದ ಕೂಡಿದೆ ಎಂದು ಆರೋಪಿಸಿದರು.
ಪದವಿ ಶಿಕ್ಷಣ ಪಡೆದವರೂ ಈ ಅರ್ಜಿಯನ್ನು ಸುಲಭವಾಗಿ ಭರ್ತಿ ಮಾಡಲಾಗುತ್ತಿಲ್ಲ. ಭರ್ತಿ ಮಾಡುವಾಗ ಸ್ವಲ್ಪ ತಪ್ಪಾದರೂ ಅವರು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ. ಮತ್ತೆ ಅವರು ಪಟ್ಟಿಗೆ ಸೇರ್ಪಡೆಯಾಗಬೇಕಾದರೆ ಎಲ್ಲ ದಾಖಲೆ ನೀಡಬೇಕಿದೆ ಎಂದು ವಿವರಿಸಿದರು.
ಜನರಿಗೆ ಎನ್ಯುಮರೇಷನ್ ಅರ್ಜಿ ತುಂಬಲು ಕಾಂಗ್ರೆಸ್ ಬಿಎಲ್ಒಗಳು ಸಹಾಯ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಒಬ್ಬೊಬ್ಬರಿಗೆ ನೆರವಾಗುವುದನ್ನು ಟೀಕಿಸಲಾಗುತ್ತಿದೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಸಾರಾ ಮಹೇಶ್ ಅವರು ಕೆ.ಆರ್. ನಗರ ತಾಲೂಕಿನ ಮಿರ್ಲೆ ಗ್ರಾಮದ ಬೂತ್‌ನಲ್ಲಿ ಮ್ಯಾಪಿಂಗ್ ಮಾಡುವಾಗ 1118 ಇದ್ದ ಮತದಾರರು ಈಗ 1134 ಆಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದು ನೈಜ್ಯವಾಗಿ ಆಗಿಯೇ ಇಲ್ಲ. ಅಂತಹ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಯಾರಿಗಾದರೂ ಅನುಮಾನಗಳು ಇದ್ದರೆ ಚುನಾವಣೆ ಆಯೋಗ ಬಳಿ ಮಾಹಿತಿ ಪಡೆಯಬೇಕು. ಅದನ್ನು ಬಿಟ್ಟು ಸುಳ್ಳು ಹೇಳುವುದನ್ನು ಬಿಡಬೇಕು ಎಂದರು.
ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಸಂಸದ ಯದುವೀರ್, ಮಾಜಿ ಸಚಿವ ಸಾರಾ ಮಹೇಶ್ ಅವರು ಎಸ್‌ಐಆರ್ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಅಕ್ರಮ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಕುರಿತು ದಾಖಲೆಯೊಂದಿಗೆ ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಪಿ.ಎಂ. ರಾಮು, ಮಹೇಶ್ ಇದ್ದರು.