ನಗರದಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮ್ಯಾಪಿಂಗ್ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಸಭೆ ನಡೆಸಿದರು. ಶೇಖ್ ತನ್ವೀರ್ ಆಸಿಫ್, ಆರ್.ಐಶ್ವರ್ಯ ಉಪಸ್ಥಿತರಿದ್ದರು.
- ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಭರವಸೆ
- ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ
ಮೈಸೂರು: ಯಾವುದೇ ಗೊಂದಲ ಉಂಟಾಗದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮ್ಯಾಪಿಂಗ್ ಪ್ರಕ್ರಿಯೆ ನಡೆಯಲಿದೆ. ಆದ್ದರಿಂದ ಮತದಾರರ ಪಟ್ಟಿಯಿಂದ ತೆಗೆದು ಹಾಕುತ್ತಾರೆ ಎಂಬ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಭರವಸೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎಸ್‌ಐಆರ್ ವಿಷಯದ ಕುರಿತು
ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡ ಸಭೆಯಲ್ಲಿ ಮಾತನಾಡಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮ್ಯಾಪಿಂಗ್ ನಡೆಯಲಿದ್ದು, ಈ ಸಂದರ್ಭದಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಒಂದಲ್ಲ, ಮೂರು ಬಾರಿ ಮನೆ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಬರಲಿದ್ದಾರೆ. ಆದ್ದರಿಂದ ಮತದಾರರ ಪಟ್ಟಿಯಿಂದ ತೆಗೆದು ಹಾಕುತ್ತಾರೆ ಎಂಬ ಆತಂಕ ಬೇಡ. ಆಟೋಮಿಟಿಕ್ ಡಿಲಿಟೇಷನ್ ಎಂಬುದು ಇಲ್ಲವೇ ಇಲ್ಲ. ಇದಕ್ಕೆಲ್ಲ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಸಹಕಾರ ನೀಡಬೇಕು. ಡುಪ್ಲಿಕೇಷನ್ ಆಗದಂತೆಯೂ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮ್ಯಾಪಿಂಗ್ ವೇಳೆ ಮತದಾರರ ಗುರುತಿನ ಚೀಟಿ ಇದ್ದರೆ ಸಮೀಕ್ಷೆ ಸುಲಭವಾಗಲಿದೆ. ಇಲ್ಲವೇ ಯಾವುದಾದರೂ ಅಗತ್ಯ ದಾಖಲೆ ನೀಡಬೇಕು. ಚುನಾವಣಾ ಆಯೋಗದ ಸೂಚನೆಯಂತೆ ಆದಷ್ಟು ಎಲ್ಲ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಮ್ಯಾಪಿಂಗ್ ಮಾಡಲಾಗುವುದು. ಮ್ಯಾಪಿಂಗ್ ಕೆಲಸದ ಬಳಿಕ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಬಿಎಲ್‌ಒ ಸೇರಿದಂತೆ ಅಧಿಕಾರಿಗಳು ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡಲಿದ್ದು, ಎಲಿಮಿನೇಷನ್ ಫಾರ್ಮ್ ನೀಡಿ, ಭರ್ತಿ ಮಾಡಿದ ಬಳಿಕ ಬಿಎಲ್‌ಒಗಳು ಮನೆ ಬಾಗಿಲಿಗೆ ಬಂದು ವಾಪಸ್ ಪಡೆದುಕೊಳ್ಳಲಿದ್ದಾರೆ. ಕೊಳಚೆ ಪ್ರದೇಶ ಸೇರಿದಂತೆ ಬೂತ್ ಮಟ್ಟದಲ್ಲಿ ಮ್ಯಾಪಿಂಗ್ ಕಾರ್ಯ ನಡೆಯಲಿದೆ. ಯಾರನ್ನು ಡಿಲೀಟ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕೆಲಸವನ್ನು ಮುಂದಿನ 15 ದಿನದಲ್ಲಿ ಒಂದು ಹಂತಕ್ಕೆ ತರಲಾಗುವುದು. ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು, ಎಚ್.ಡಿ.ಕೋಟೆ, ನಂಜನಗೂಡು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ವರುಣ ಮತ್ತು ಟಿ.ನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ 27,99,955 ಮತದಾರರಿದ್ದು, 24,65,474 ಜನರ ಮ್ಯಾಪಿಂಗ್ ಮುಕ್ತಾಯಗೊಂಡಿದೆ. ಉಳಿದ 3,34,481 ಮತದಾರರ ಮ್ಯಾಪಿಂಗ್ ಬಾಕಿ ಉಳಿದಿದೆ. ವೇಗವಾಗಿ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ, ಮ್ಯಾಪಿಂಗ್ ಮತ್ತು ಎಸ್‌ಐಆರ್ ವ್ಯವಸ್ಥಿತವಾಗಿ ನಡೆಯಬೇಕು. ಎಸ್‌ಐಆರ್‌ಗೆ ವಿರೋಧವಿದ್ದರೂ ಚುನಾವಣಾ ಆಯೋಗದ ನಿಯಮಗಳ ಅಡಿಯಲ್ಲಿ ಪರಿಷ್ಕರಣೆಯಾಗಬೇಕು. ಎಲ್ಲಿಯೂ ಸಣ್ಣ ಲೋಪವಾಗಬಾರದು. ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಉಪಸ್ಥಿತರಿದ್ದರು.