ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿದರು. ವೈ.ಎಸ್.ರಾಮಸ್ವಾಮಿ, ದೇವರಾಜು, ಚೆಲುವರಾಜು, ಕುಂತನಹಳ್ಳಿ ಜಯರಾಮೇಗೌಡ ಇತರರು ಇದ್ದರು. 
ಮೈಸೂರು

28ರಂದು ಒಕ್ಕಲಿಗರ ವಧು-ವರರ ಸಮಾವೇಶ

ನಾಗೇಶ ಎಸ್
ತಿ.ನರಸೀಪುರ: ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹೋಬಳಿ ಶಾಖೆಯಿಂದ ಬನ್ನೂರು ಪಟ್ಟಣದಲ್ಲಿ ಮೇ 28ರಂದು ಆಯೋಜಿಸಲಿರುವ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಧು- ವರರು ಆಗಮಿಸಿ ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ ಜಿಲ್ಲಾಧ್ಯಕ್ಷ ರವಿಕುಮಾರ್ ಮನವಿ ಮಾಡಿದರು.
ಬನ್ನೂರು ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟ್ರಸ್ಟ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬನ್ನೂರಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದ್ದು, ಒಕ್ಕಲಿಗ ಸಮಾಜದ ವಧು-ವರರು ತಮ್ಮ ಪಾಲಕರೊಂದಿಗೆ ಭಾಗವಹಿಸಬಹುದಾಗಿದೆ. ವಧು-ವರರು ಬರುವ ವೇಳೆ ತಮ್ಮ ಸಂಪೂರ್ಣವಾದ ಮಾಹಿತಿ ಹಾಗೂ ಭಾವಚಿತ್ರವನ್ನು ತರಬೇಕು. ಕಾರ್ಯಕ್ರಮ ಉದ್ಘಾಟನೆಯ ನಂತರ ವಧು-ವರರನ್ನು ಪ್ರತ್ಯೇಕ ಸ್ಥಳದಲ್ಲಿ ಕೂರಿಸಿ ವಧುವಿದ್ದ ಕಡೆ ವರನ ಮಾಹಿತಿ ಹಾಗೂ ವರನಿದ್ದ ಕಡೆ ವಧುವಿನ ಮಾಹಿತಿ ನೀಡಲಾಗುತ್ತದೆ. ಪರಸ್ಪರರಿಗೆ ಹೊಂದಾಣಿಕೆಯಾದರೆ ಸಂಪರ್ಕಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ನೇಗಿಲಯೋಗಿ ಸೇವಾ ಟ್ರಸ್ಟ್‌ನ ಮಂಡ್ಯ, ಬೆಂಗಳೂರು, ರಾಮನಗರ, ಪಾಂಡವಪುರ, ಕನಕಪುರ, ಮಾಗಡಿ, ಚನ್ನಪಟ್ಟಣ, ತುರುವೇಕೆರೆ, ಕೆ.ಆರ್.ನಗರ ಶಾಖೆಗಳಲ್ಲಿ ನೋಂದಾಯಿಸಿಕೊಂಡಿರುವ ಸುಮಾರು 2 ಸಾವಿರ ವಧು-ವರರ ಮಾಹಿತಿಯನ್ನು ನೋಡಲು ಅವಕಾಶ ನೀಡಲಾಗುತ್ತದೆ. ವಿಚ್ಚೇದಿತರೂ ಸಮಾವೇಶದಲ್ಲಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ತಾಲೂಕಿನಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಈ ಸಮಾವೇಶದಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಗೌರವಾಧ್ಯಕ್ಷ ವೈ.ಎಸ್.ರಾಮಸ್ವಾಮಿ ಮಾತನಾಡಿ, ಒಕ್ಕಲಿಗ ಸಮಾಜದ ಯುವಕ-ಯುವತಿಯರಿಗೆ ಉತ್ತಮ ಕುಟುಂಬಗಳನ್ನು ಪರಿಚಯಿಸಿ, ಸುಸಂಸ್ಕೃತ ದಾಂಪತ್ಯ ಜೀವನಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ. ಮದುವೆ ಎಂಬುದು ಕೇವಲ ಇಬ್ಬರ ಸಂಬಂಧವಲ್ಲ, ಅದು ಎರಡು ಕುಟುಂಬಗಳ ಬಾಂಧವ್ಯವಾಗಿದೆ. ಇಂದಿನ ವೇಗದ ಜೀವನಶೈಲಿಯಲ್ಲಿ ಸೂಕ್ತ ಪರಿಚಯ ಮತ್ತು ವಿಶ್ವಾಸದ ಕೊರತೆ ಇರುವ ಸಂದರ್ಭದಲ್ಲಿ ವಧು-ವರರ ಸಮಾವೇಶಗಳು ಉತ್ತಮ ಅವಕಾಶವನ್ನು ಒದಗಿಸುತ್ತವೆ. ಸಮಾಜದ ಎಲ್ಲ ಹಂತದ ಜನರು ಒಂದೇ ವೇದಿಕೆಯಲ್ಲಿ ಸೇರಿ ಪರಸ್ಪರ ಪರಿಚಯ ಹೊಂದುವ ಮೂಲಕ ಉತ್ತಮ ಸಂಬಂಧಗಳು ನಿರ್ಮಾಣವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾರ್ಯಕ್ರಮದ ಉದ್ದೇಶ, ವ್ಯವಸ್ಥಾಪನಾ ಜವಾಬ್ದಾರಿಗಳು ಹಾಗೂ ಸಮಾವೇಶಕ್ಕೆ ಆಗಮಿಸುವ ವಧು-ವರರು ಮತ್ತು ಪಾಲಕರಿಗೆ ಅಗತ್ಯ ಸೌಲಭ್ಯಗಳ ಕುರಿತು ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ನೋಂದಣಿ ವ್ಯವಸ್ಥೆ, ಊಟೋಪಚಾರ, ವೇದಿಕೆ ವ್ಯವಸ್ಥೆ, ಸ್ವಾಗತ ಸಮಿತಿ, ಶಿಸ್ತು ಸಮಿತಿ ಹಾಗೂ ಪ್ರಚಾರ ಕಾರ್ಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಬೀಡನಹಳ್ಳಿ ದೇವರಾಜು, ಚೆಲುವರಾಜು, ಕುಂತನಹಳ್ಳಿ ಜಯರಾಮೇಗೌಡ, ಕೊಡಗಹಳ್ಳಿ ಶಿವಕುಮಾರ್, ಬನ್ನೂರು ಶ್ರೀನಿವಾಸಮೂರ್ತಿ, ಬಾಲರಾಜು, ಬೇವಿನಹಳ್ಳಿ ಮಹದೇವು, ತುರುಗನೂರು ಮಾದೇಗೌಡ, ಯಾಚೇನಹಳ್ಳಿ ವೈ.ಟಿ.ಮಹೇಶ್, ಚನ್ನೇಗೌಡ, ಸತೀಶ್, ಲೋಕೇಶ್ ಇದ್ದರು.