ಮೂಗೂರು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕೆ.ಪಿ.ವಿಜಯ ಕುಮಾರ್, ಸಿ.ಪುಟ್ಟಸ್ವಾಮಿ, ಎಂ.ರಾಚಯ್ಯ, ಎಂ.ಜಯಂತ್, ನಾಗರಾಜು, ಮಹದೇವ, ಪುಟ್ಟರಸ, ರಾಜೇಶ್, ನಾಗಸ್ವಾಮಿ ಇದ್ದರು.
ಮೂಗೂರು: ಸಾಮಾನ್ಯ ಬದುಕಿನ ಒಡನಾಟದ ಜತೆಗೆ ಜ್ಞಾನದ ಒಡನಾಟ ಇಟ್ಟುಕೊಂಡಾಗ, ಶ್ರಮದ ಬದುಕಿನ ಅರಿವಾಗುತ್ತದೆ ಎಂದು ನಂಜನಗೂಡಿನ ಜೆ.ಎಸ್.ಎಸ್.ಪಾಲಿಟೆಕ್ನಿಕ್ ನಿವೃತ್ತ ಉಪನ್ಯಾಸಕ ಮೂಗೂರು ಕೆ.ಪಿ.ವಿಜಯ ಕುಮಾರ್ ಹೇಳಿದರು.
ಮೂಗೂರು ಕರ್ನಾಟಕ ಪಬ್ಲಿಕ್ ಶಾಲೆ, ಕಾಲೇಜು ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಾರೋಪ ಸಮಾರಂಭ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಕಲಿಕೆಯಲ್ಲಿ ಸ್ವಂತಿಕೆ ಇರಬೇಕು. ಶಿಕ್ಷಣ ಎಂಬುದು ಕೇವಲ ಪದವಿ ಪ್ರಮಾಣಪತ್ರ ಪಡೆಯುವಂತದಲ್ಲ. ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವಂತಹದ್ದು. ಯಾರು ಸದ್ಗುಣ ರೂಢಿಸಿಕೊಂಡಾಗ ಸಾಮಾನ್ಯ ವ್ಯಕ್ತಿಯೂ ವಿಶೇಷ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿ ರೂಪುಗೊಳ್ಳತ್ತಾನೆ ಎಂದು ಹೇಳಿದರು.
ವಿದ್ಯಾರ್ಥಿಗಳು ಹವ್ಯಾಸ, ದೃಷ್ಟಿ ವಿವೇಕ, ದಿಕ್ಕು ಮೈಗೂಡಿಸಿಕೊಂಡರೆ ಸರ್ವಾಂಗೀಣ ವ್ಯಕ್ತಿಯಾಗಿ ಹೊರ ಹೊಮ್ಮುಲು ಸಾಧ್ಯ. ನಿರಂತರ ಜೀವನ ಕ್ರಮ ಅನುಸರಿಸುವುದರಿಂದ ಬದುಕಿನಲ್ಲಿ ಸಾರ್ಥಕತೆ ಕಾಣಬಹುದು. ಅವಕಾಶಗಳು ಮುಕ್ತವಾಗಿವೆ. ನೈತಿಕತೆ ಇಲ್ಲದ ಸಮಾಜದಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ನುಡಿಗಳನ್ನಾಡಿದರು.
ಇದೇ ವೇಳೆ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಿಬಿಸಿ ಸಮಿತಿ ಅಧ್ಯಕ್ಷ ಎಂ.ಜಯಂತ್ ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಎಂ.ರಾಚಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆ.ಪಿ.ಎಸ್. ಶಾಲೆಯ ಉಪ ಪ್ರಾಂಶುಪಾಲ ಸಿ.ಪುಟ್ಟಸ್ವಾಮಿ, ಸಿಬಿಸಿ ಸಮಿತಿ ಸದಸ್ಯ ಎಂ.ನಾಗರಾಜು, ಮಹದೇವ, ಉಪನ್ಯಾಸಕರಾದ ಪುಟ್ಟರಸ, ರಾಜೇಶ್, ನಾಗಸ್ವಾಮಿ, ನಾಗರಾಜು, ಲಕ್ಷ್ಮೀ, ಮಂಜುಳಾ, ಶಾಂತಿ, ಧನಶೆಲ್ವಿ, ಶೃತಿ, ಅಶ್ವಿನಿ, ಪ್ರಮೀಣ್, ನಿಂಗರಾಜು ಇತರರು ಉಪಸ್ಥಿತರಿದ್ದರು.