ಇಮ್ಮಾವು ಹುಂಡಿಯ ಸರ್ಕಾರಿ ಶಾಲೆ ಮುಚ್ಚಬಾರದು ಎಂದು ಭಾನುವಾರ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳುಶಾಲೆಯ ಮಂದೆ ಪ್ರತಿಭಟನೆ ನಡೆಸಿದರು. ಚಂದ್ರಕಲಾ, ಶಿವಣ್ಣ, ರಾಜಣ್ಣ, ಸ್ವ್ವಾತಿ, ಚಂದ್ರಿಕಾ, ದಿಶಾ, ನಂದೀಶ್, ಅಭಿಷೇಕ್, ದೀಕ್ಷಾ, ವಿಕಾಸ್, ಎಚ್.ಎಂ.ಬಸವರಾಜು ಇತರರು ಇದ್ದರು.
ಮೈಸೂರು: ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಇಮ್ಮಾವು ಹುಂಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಮಂದೆ ಪ್ರತಿಭಟನೆ ನಡೆಸಿದರು.
ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, ಇಮ್ಮಾವು ಸರ್ಕಾರಿ ಶಾಲೆಯನ್ನು ಹೊರಳವಾಡಿ ಶಾಲೆಗೆ ವಿಲೀನಗೊಳಿಸಲಾಗುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಪ್ರಾಥಮಿಕ ಶಿಕ್ಷಣವು ಒಂದು ಕಿಲೋ ಮೀಟರ್ ವ್ಯಾಪ್ತಿಯ ಒಳಗೆ ಇರಬೇಕು ಎಂಬುದು ನಿಯಮ. ಇದಕ್ಕೆ ವಿರುದ್ಧವಾಗಿ ಸರ್ಕಾರವು ಈ ಶಾಲೆಯನ್ನು ಮುಚ್ಚಿ ಹೊರಳವಾಡಿ ಶಾಲೆಗೆ ವಿಲೀನ ಮಾಡುತ್ತಿರುವುದು ಖಂಡನೀಯ ಎಂದರು.
ಸರ್ಕಾರದ ಹೊಸ ಆದೇಶವು ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ದೀಪ ಮತ್ತು ಹಣತೆ ಮಾಡಲು, ಅಡಿಕೆ ಕಾಯಿ ಬಿಡಿಸಲು, ಇತ್ಯಾದಿ ತರಬೇತಿ ನೀಡುತ್ತಾ ಸರ್ಕಾರಿ ಶಾಲೆ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರ ಉಳಿಯುವಂತೆ ಹಾಗೂ ಬಡ ಕುಟುಂಬದ ಮಕ್ಕಳನ್ನು ಬಾಲ ಕಾರ್ಮಿಕರಾಗಿಸುವ ಸಂಚನ್ನು ಕಾನೂನಾತ್ಮಕವಾಗಿಯೇ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಅನುಷ್ಠಾನಕ್ಕೆ ತರುತ್ತಿರುವುದು ವಿಷಾದನೀಯ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಗ್ರಾಮಸ್ಥ ಶಿವಣ್ಣ ಮಾತನಾಡಿ, ನಮ್ಮ ಊರಿನ ಸರ್ಕಾರಿ ಶಾಲೆ ಮುಚ್ಚಿದರೆ ನಾವು ಸತ್ತಂತೆ. ಒಂದು ವೇಳೆ ಸರ್ಕಾರಿ ಶಾಲೆ ಮುಚ್ಚಿದರೆ, ಸರ್ಕಾರ ನಮ್ಮನ್ನು ಎದುರಿಸಬೇಕಾಗುತ್ತದೆ. ನಮ್ಮ ಊರಿನಲ್ಲಿ ಶೇ.99 ರಷ್ಟು ದುಡಿಯುವ ಜನರು ಇದ್ದಾರೆ. ಸರ್ಕಾರಿ ಶಾಲೆ ಮುಚ್ಚಿದರೆ ನಮ್ಮ ಪರಿಸ್ಥಿತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.
ರಾಜಣ್ಣ ಮಾತನಾಡಿ, ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳನ್ನ ಮುಚ್ಚಿ ವಿಲೀನ ಮಾಡುವ ಕ್ರಮ ಸರಿಯಲ್ಲ. ಹಳ್ಳಿಯಲ್ಲಿರುವ ಶಾಲೆಗಳಿಗೆ ಮಕ್ಕಳು ನೇರವಾಗಿ ಹೋಗಿ ಮನೆಗೆ ಬರುತ್ತಾರೆ. ಈ ವ್ಯವಸ್ಥೆಯನ್ನು ಬದಲಾಯಿಸಿ ಕರ್ನಾಟಕ ಪಬ್ಲಿಕ್ ಶಾಲೆ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವುದು ಖಂಡನೀಯ ಎಂದರು.
ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಚಂದ್ರಿಕಾ, ದಿಶಾ, ನಂದೀಶ್, ಅಭಿಷೇಕ್, ದೀಕ್ಷಾ, ವಿಕಾಸ್, ಜಿಲ್ಲಾಧ್ಯಕ್ಷ ಎಚ್.ಎಂ.ಬಸವರಾಜು, ಗ್ರಾಮಸ್ಥರಾದ ಚಿನ್ನಯ್ಯ, ಮಹದೇವ, ಜಯಲಕ್ಷ್ಮೀ, ಸುಮಾ, ಮಂಜು, ಶ್ರೀನಿವಾಸ, ದೇವರಾಜ, ಮಹೇಂದ್ರ, ಸ್ವಾಮಿ ಇತರರು ಇದ್ದರು