ಬದನವಾಳ ಸತ್ಯಾಗ್ರಹ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ್ರಸನ್ನ ಮಾತನಾಡಿದರು. ಜಯದೇವ, ಯತಿರಾಜ್, ವೆಂಕಟರಾಜು, ಪುಣಜೂರು ದೊರೆಸ್ವಾಮಿ, ಎ.ಡಿಸಿಲ್ವಾ, ಮಹದೇವಪ್ಪ, ಬಸವರಾಜು ಇತರರು ಇದ್ದರು.
- ಇಂದು ವಿದೇಶಿ ವಸ್ತುಗಳ ವ್ಯಾಮೋಹ ಹೆಚ್ಚಾಗಿದ್ದು, ಆಡಂಬರಕ್ಕೆ ಒತ್ತು ನೀಡಲಾಗುತ್ತಿದೆ
- ಸತ್ಯಾಗ್ರಹ ಮಾದರಿಯಲ್ಲಿ ಅಹಿಂಸಾತ್ಮಕ ಚಳವಳಿ ಮುನ್ನಡೆಸಿಕೊಂಡು ಹೋಗುವ ಅಗತ್ಗಯವಿದೆ
ಮೈಸೂರು:ಅಹಿಂಸಾತ್ಮಕ ಚಳವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಾದ ಅಗತ್ಯವಿದೆ ಎಂದು ದೀನಬಂಧು ಟ್ರಸ್ಟ್‌ನ ಜಯದೇವ ಅಭಿಪ್ರಾಯ ಪಟ್ಟರು.
ನಗರದ ಹಾರ್ಡ್ವೀಕ್ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಿಂದ ಜರುಗಿದ ಬದನವಾಳು ಸತ್ಯಾಗ್ರಹದ ಸತ್ಯಾಗ್ರಹಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಕೊಟ್ಟ ಗಾಂಧಿ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕಿದೆ. ಇಂದು ವಿದೇಶಿ ವಸ್ತುಗಳ ವ್ಯಾಮೋಹ ಹೆಚ್ಚಾಗಿದ್ದು, ಆಡಂಬರಕ್ಕೆ ಒತ್ತು ನೀಡಲಾಗುತ್ತಿದೆ. ಇದರ ವಿರುದ್ಧ ಗ್ರಾಮ ಸ್ವಾತಂತ್ರೃವಾಗುವ ನಿಟ್ಟಿನಲ್ಲಿ ಅಹಿಂಸಾತ್ಮಕ ಚಳವಳಿಯನ್ನು ನಡೆಸಬೇಕಿದೆ ಹೇಳಿದರು.
ರಂಗಕರ್ಮಿ ಪ್ರಸನ್ನ ಮಾತನಾಡಿ, ಹದಿನೈದು ವರ್ಷಗಳ ಹಿಂದೆ ನಡೆದ ಬದನವಾಳು ಸತ್ಯಾಗ್ರಹ ಮುಖ್ಯವಾಗಿ ಅತಿಯಾದ ವಾಹನಗಳ ಬಳಕೆ, ಆಡಂಬರದ ಕಾರ್ಯಕ್ರಮಗಳು ಹಾಗೂ ವ್ಯಾಪಾರೀಕರಣ ಇಂತಹ ವಿಚಾರವನ್ನು ಮುಖ್ಯವಾಗಿರಿಸಿಕೊಂಡು ಚಳವಳಿಯ ರೂಪ ತಳೆಯಿತು ಎಂದರು.
ಆದರೆ ಇಂದು ಕೂಡ ಪರಿಸ್ಥಿತಿ ಬದಲಾಗಿಲ್ಲ. ಹಾಗಾಗಿ ಈ ಸತ್ಯಾಗ್ರವನ್ನು ಅದೇ ಮಾದರಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಚರ್ಚಿಸುವುದು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಸರ್ಕಾರವು ಬದನವಾಳು ನಂಜನಗೂಡು ಖಾದಿ ಕೇಂದ್ರದ ಅಭಿವೃದ್ಧಿಗೆ 40 ಕೋಟಿ ರೂ. ಸರ್ಕಾರ ಮಂಜೂರು ಮಾಡಿದೆ. ಸರ್ಕಾರ ಕೇವಲ ಕಟ್ಟಡ ಕಟ್ಟುವುದನ್ನು ಬೆಳವಣಿಗೆ ಎಂದು ತಿಳಿದಿದೆ. ಬದನವಾಳು ಖಾದಿ ಕೇಂದ್ರವನ್ನು ಕೇಂದ್ರವಾಗಿಟ್ಟುಕೊಂಡು ಖಾದಿಯ ಬಟ್ಟೆಗಳ ಮಾರಾಟದ ಮೂಲಕ ಮತ್ತೆ ಗ್ರಾಮೀಣ ಮಹಿಳೆಯರಿಗೆ ಅವರ ಊರಿನಲ್ಲೇ ಗ್ರಾಮೀಣ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸಾಧ್ಯವಿದೆ ಎಂದು ಹೇಳಿದರು.
ಬದನವಾಳಿಗೆ ಗಾಂಧೀಜಿ ಭೇಟಿ ಕೊಟ್ಟ ಕಾರಣಕ್ಕೆ ಈ ಖಾದಿ ಕೇಂದ್ರಕ್ಕೆ ಅತಿ ಹೆಚ್ಚು ಮಹತ್ವ ಬಂದಿದೆ. ಗ್ರಾಮ ಬದುಕಿನ ಮಹತ್ವ ಸಾರುವ ಸುಸ್ಥಿರ ಬದುಕಿನ ಕನಸನ್ನು ನನಸು ಮಾಡಬೇಕಿದೆ. ಈ ಸಂಬಂಧ ನಡೆದ ಸಭೆಯಲ್ಲಿ ಬದನವಾಳು ಸತ್ಯಾಗ್ರವನ್ನು ಗ್ರಾಮ ಸತ್ಯಾಗ್ರಹ ಎಂದು ಮರುನಾಮಕರಣ ಮಾಡುವ ಚರ್ಚಿಸಲಾಗಿದೆ ಎಂದರು.
ತುಮಕೂರಿರು ಯತಿರಾಜ್, ಚಾಮರಾಜನಗರದ ವೆಂಕಟರಾಜು, ಪುಣಜೂರು ದೊರೆಸ್ವಾಮಿ, ಎ.ಡಿ. ಸಿಲ್ವಾ, ತಗಡೂರು ಮೋಹನ್, ಬದನವಾಳು ಮಹದೇವಪ್ಪ, ಉಮಾಶಂಕರ್, ಬೆಂಗಳೂರಿನಿಂದ ಪವಿತ್ರ ಮುದ್ದಯ್ಯ, ಗ್ರಾಮ ಸೇವಾ ಸಂಘದಿಂದ ಲಾವಣ್ಯ, ಅಭಿಲಾಷ್, ಲೇಖಕರಾದ ಜಿ. ಪಿ. ಬಸವರಾಜು, ಪತ್ರಕರ್ತೆ ರಶ್ಮಿ ಕೋಟಿ, ಕರುಣಾಕರ್ ಇದ್ದರು.
* 2015ರ ಚಾರಿತ್ರಿಕ ಬದನವಾಳು ಸತ್ಯಾಗ್ರಹದ ನಿರ್ಣಯಗಳು ಜಾರಿಗೊಳ್ಳದೆ ಉಳಿದಿದೆ. ಸುಸ್ಥಿರ ಬದುಕು ಹಾಗೂ ಸುಸ್ಥಿರ ಆರ್ಥಿಕತೆಗಳು ಕೇವಲ ಮರೀಚಿಕೆಯಾಗಿವೆ. ನಗರಗಳು ಹಾಗೂ ಯಂತ್ರನಾಗರಿಕತೆ ರಾಕ್ಷಸಾಕಾರವಾಗಿ ಬೆಳೆದು ಮನುಕುಲವನ್ನೇ ವಿನಾಶದ ಅಂಚಿಗೆ ತಳ್ಳಿದೆ.
* 2015ರ ಬದನವಾಳು ಸತ್ಯಾಗ್ರಹವನ್ನು ಗ್ರಾಮ ಸತ್ಯಾಗ್ರಹವೆಂದು ಮರುನಾಮಕರಣ ಮಾಡಿ, ಗ್ರಾಮ ವ್ಯವಸ್ಥೆ, ಕೈ ಉತ್ಪನ್ನಗಳ ಆರ್ಥಿಕತೆ, ಸಹಜ ಕೃಷಿ, ಸ್ಥಳೀಯ ಸಂಸ್ಕೃತಿಗಳು, ಮಾತೃಭಾಷೆಗಳು ದುರ್ಬಲ ಜನವರ್ಗಗಳು ಹಾಗೂ ದುರ್ಬಲಗೊಂಡಿರುವ ಪ್ರಾಕೃತಿಕ ಸಂಪನ್ಮೂಲಗಳು ಎಲ್ಲವನ್ನು ಮೇಲೆತ್ತಬಲ್ಲ ಅಹಿಂಸಾತ್ಮಕ ಚಳವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸುವವರಿದ್ದೇವೆ.