ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ಪಕ್ಷದ ಪೋಸ್ಟರ್‌ನ್ನು ಗಣ್ಯರು ಬಿಡುಗಡೆ ಮಾಡಿದರು. ಬಿ.ಕೆ.ಮೋಹನ್‌ಕುಮಾರ್, ಚಿನ್ಮಯ ತಾಯಿ, ಜಯದೇವಿ ತಾಯಿ, ವೇದಾವತಿ ಮಾತಾಜಿ, ಬ್ರಹ್ಮಶ್ರೀ ರಾಜು ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ ಇದ್ದರು.
- ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಕೆ.ಮೋಹನ್‌ಕುಮಾರ್ ಮಾಹಿತಿ
ರಾಜ್ಯದ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಬಲವರ್ಧನೆಗಾಗಿ ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ಪಕ್ಷ ಸ್ಥಾಪಿಸಿದ್ದು, ಜೂ.7ರಂದು ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ ಎಂದು ರಾಷ್ಟ್ರೀಯ ಉಪಾಧ್ಯಕ್ಷ ಬಿ.ಕೆ.ಮೋಹನ್‌ಕುಮಾರ್ ತಿಳಿಸಿದರು.
ಪಕ್ಷ ಉದ್ಘಾಟನೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ವಿವಿಧ ಮಠಾಧೀಶರ ಕೃಶೀರ್ವಾದ ಮಹಾಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.7ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಸುಮಾರು 100 ರಿಂದ 150 ಮಠಾಧೀಶರು ಆಗಮಿಸಿ ಆಶೀರ್ವಾದ ನೀಡಲಿದ್ದಾರೆ. ಇಷ್ಟು ದಿನ ಬೇರೆಯವರಿಗೆ ವೋಟ್ ಹಾಕಿ ಮಣ್ಣಾಗಿದ್ದಾಯಿತು. ಇನ್ನು ಮುಂದೆ ನಮ್ಮ ವೋಟ್ ನಮಗೆ. ಮೀನು ಮಾರುವವನು, ಬಟ್ಟೆ ಒಗೆಯುವವನ ಮಗನೂ ವಿಧಾನಸೌಧ ಹತ್ತಬೇಕು. ಅದೇ ನಮ್ಮ ಪಕ್ಷದ ಗುರಿ ಎಂದರು.
ಕರ್ನಾಟಕದಲ್ಲಿ ಬೆಸ್ತ, ಕೋಲಿ, ಗಂಗಾಮತ ಸೇರಿದಂತೆ 60 ರಿಂದ 70 ಲಕ್ಷ ಮತದಾರರಿದ್ದಾರೆ. ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿದ್ದರೂ ವಿಧಾನಸೌಧದಲ್ಲಿ ಸಮುದಾಯವನ್ನು ಪ್ರತಿನಿಧಿಸಲು ಒಬ್ಬನೇ ಒಬ್ಬ ಶಾಸಕನಿಲ್ಲದಿರುವುದು ನಮಗೆ ಆಗಿರುವ ದ್ರೋಹ. ಚುನಾವಣಾ ಸಮಯದಲ್ಲಿ ಅಹಿಂದ ಹೆಸರಿನಲ್ಲಿ ಅಧಿಕಾರ ಹಿಡಿಯುವ ಪ್ರಮುಖ ಪಕ್ಷಗಳು, ವೋಟ್ ಬಿದ್ದ ಮೇಲೆ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸುತ್ತವೆ. ಈ ರಾಜಕೀಯ ಅನ್ಯಾಯದ ವಿರುದ್ಧ ನಮ್ಮದೇ ಆದ ಪಕ್ಷ ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಮೈತ್ರಿ ಇಲ್ಲವೇ ಸ್ವತಂತ್ರ ಸ್ಪರ್ಧೆ:
ಪ್ರಸ್ತುತ ರಾಷ್ಟ್ರ ಮಟ್ಟದಲ್ಲಿ ಮಹಾಘಟಬಂಧನ್ ಭಾಗವಾಗಿರುವ ವಿಐಪಿ ಪಕ್ಷ, ರಾಜ್ಯದಲ್ಲೂ ಕಾಂಗ್ರೆಸ್ ಜೊತೆ ಮೈತ್ರಿಯಲ್ಲಿದೆ. ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಸೀಟುಗಳ ಪಾಲು ಕೇಳುತ್ತಿದ್ದೇವೆ. ಒಂದು ವೇಳೆ ಸೀಟು ಹಂಚಿಕೆಯಲ್ಲಿ ತಾರತಮ್ಯವಾದರೆ ಸ್ವತಂತ್ರವಾಗಿ ಚುನಾವಣೆ ಎದುರಿಸಲು ಪಕ್ಷ ನಿರ್ಧರಿಸಿದೆ. ರಾಜ್ಯದ 60 ರಿಂದ 70 ಬಲಿಷ್ಠ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿ, 10-20 ಸ್ಥಾನಗಳನ್ನು ಗೆಲ್ಲುವ ಮೂಲಕ ಮುಂದಿನ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತೇವೆ. ನಮ್ಮ ಬೆಂಬಲವಿಲ್ಲದೆ ವಿಧಾನಸೌಧದಲ್ಲಿ ಮುಂದಿನ ಯಾವುದೇ ಸರ್ಕಾರ ರಚನೆಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಹಿಂದುಳಿದ ಮಠಗಳ ಕಡೆಗಣನೆ:
ದೊಡ್ಡ ದೊಡ್ಡ ರಾಜಕೀಯ ನಾಯಕರು ಹಿಂದುಳಿದ ವರ್ಗಗಳ ಮಠಗಳ ಹೆಸರಿನಲ್ಲಿ ಕೋಟ್ಯಂತರ ರೂ. ಬಿಡುಗಡೆ ಮಾಡಿಸಿಕೊಂಡು, ಮಠಗಳ ಕೈಗೆ ಕೇವಲ ಕೆಲವು ಲಕ್ಷಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ಮಠಗಳಲ್ಲಿ ಕನಿಷ್ಠ ಮೂಲಸೌಕರ್ಯ ಹಾಗೂ ದಾಸೋಹ ನಡೆಸಲು ಕಷ್ಟವಾಗುತ್ತಿದೆ. ಈ ಅನ್ಯಾಯ ಸರಿಪಡಿಸಲು ವಿವಿಧ ಸರ್ಕಾರಗಳು ಹಿಂದುಳಿದ ಮಠಗಳಿಗೆ ನೀಡಿರುವ ಅನುದಾನದ ಕುರಿತು ವಿಶೇಷ ಡಾಕ್ಯುಮೆಂಟರಿ (ಸಾಕ್ಷ್ಯಚಿತ್ರ) ಒಂದನ್ನು ಸಿದ್ಧಪಡಿಸಲಾಗುತ್ತಿದೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಮಠಾಧೀಶರು ಮಾತೆಯರಾದ ಚಿನ್ಮಯ ತಾಯಿ, ಜಯದೇವಿ ತಾಯಿ, ವೇದಾವತಿ ಮಾತಾಜಿ, ಬ್ರಹ್ಮಶ್ರೀ ರಾಜು ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಮುಖಂಡರಾದ ಈಶ್ವರ್, ಶಿವನಂಜಯ್ಯ ಸೇರಿದಂತೆ ಹಲವರು ಇದ್ದರು.