ಎನ್‌ಐಇ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಪ್ರಥಮ ದರ್ಜೆ ಕಾಲೇಜಿನ ನೂತನ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ಎಸ್. ಮಾಲಿನಿ, ಡಾ.ಸಿ.ಎಸ್.ಆಶಾ ಇದ್ದರು.
- ಪ್ರಾಧ್ಯಾಪಕಿ ಡಾ.ಸುತ್ತೂರು ಎಸ್.ಮಾಲಿನಿ ಅಭಿಮತ
- ವಿದ್ಯಾರ್ಥಿಗಳ ಪುನಶ್ಚೇತನ ಸಮಾರಂಭ
ಸತತ ಪರಿಶ್ರಮ ಇದ್ದಾಗ ಮಾತ್ರ ಗೆಲುವು ಸಾಧ್ಯ ಎಂದು ಪ್ರಾಧ್ಯಾಪಕಿ ಡಾ.ಸುತ್ತೂರು ಎಸ್.ಮಾಲಿನಿ ಹೇಳಿದರು.
ನಗರದ ಎನ್‌ಐಇ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಎನ್‌ಐಇ ಪ್ರಥಮ ದರ್ಜೆ ಕಾಲೇಜಿನ ನೂತನ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಅವಕಾಶಗಳು ಬಹಳಷ್ಟಿವೆ. ಅದನ್ನು ಸಾಧಿಸಲು ಛಲ ಹಾಗೂ ಪ್ರಯತ್ನ ಬೇಕು. ಶಿಕ್ಷಣ ಮಾತ್ರ ವಿದ್ಯಾರ್ಥಿಯ ಜೀವನವನ್ನು ಬೆಳಗಿಸುವಂತದ್ದು. ಜತೆಗೆ ಬದಲಾವಣೆಗಳಿಗೆ ಹೊಂದಿಕೊಂಡು ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೇವೆ ಅನ್ನುವುದು ನಿರ್ಣಾಯಕ. ದೈಹಿಕ ಹಾಗೂ ಮಾನಸಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ವಿದ್ಯಾರ್ಥಿಯು ಪ್ರಬುದ್ಧನಾಗಲು ಸಾಧ್ಯ ಎಂದು ತಿಳಿಸಿದರು.
ಒಳ್ಳೆ ಅಭ್ಯಾಸಗಳು ಮತ್ತು ಉತ್ತಮ ನಿದ್ರೆಯು ವೃತ್ತಿಯ ಜತೆಗೆ ಸವಾಂರ್ಂಗೀಣ ವ್ಯಕ್ತಿತ್ವಕ್ಕೆ ಸಹಾಯ ಮಾಡುತ್ತದೆ. ಉತ್ತಮ ರೀತಿಯಲ್ಲಿ ಅಧ್ಯಯನ ಮಾಡುವುದಕ್ಕೆ ನಿರಂತರ ಓದುವಿನ ನಡುವೆ ಮಧ್ಯಂತರ ವಿರಾಮವೂ ಅಗತ್ಯ. ಶಿಕ್ಷಣದ ಉದ್ದೇಶ ಅರ್ಥಮಾಡಿಕೊಂಡು, ಹೇಗೆ ಅಧ್ಯಯನ ಮಾಡಬೇಕು ಎಂಬುದನ್ನು ತಿಳಿಯಬೇಕು ಎಂದರು.
ಪ್ರಾಂಶುಪಾಲೆ ಡಾ.ಸಿ.ಎಸ್.ಆಶಾ ಮಾತನಾಡಿ, ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ. ವಿದ್ಯೆ ಎಂಬುದೂ ನಿಜವಾದ ಸಂಪತ್ತು. ಇದನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಶಿಸ್ತು ಮತ್ತು ಸಂಸ್ಕಾರದಿಂದ ಕೂಡಿದ ವಿದ್ಯಾರ್ಥಿ ಜೀವನ ಅತ್ಯಂತ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ ಎಂದರು.