ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಎಚ್.ಬಸವನಗೌಡಪ್ಪ ಉದ್ಘಾಟಿಸಿದರು. ಡಾ.ಬಿ.ಮಂಜುನಾಥ, ಡಾ.ವಿಶಾಲ ಕುಮಾರ್ ಗುಪ್ತ, ಡಾ.ಕೆ.ಎ.ರವೀಶ, ಡಾ.ಟಿ.ಎಸ್.ಗೋಪಿನಾಥ್ ಇತರರು ಇದ್ದರು.
- ಪರೀಕ್ಷೆಯಲ್ಲಿ ಬರೆದು ಮರೆತುಬಿಡುವ ಶಿಕ್ಷಣವು ನಿಜವಾದ ಕಲಿಕೆಯಲ್ಲ
- ವಿದ್ಯಾರ್ಥಿಗಳು ವಿಭಿನ್ನರಾಗಿರಬೇಕು ಎಂಬ ನಿರೀಕ್ಷೆಯನ್ನು ಜಗತ್ತು ಇಟ್ಟುಕೊಳ್ಳುತ್ತಿದೆ
ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದ ಸಂಪೂರ್ಣ ಸ್ವರೂಪವೇ ಬದಲಾಗುತ್ತಿದ್ದು, ಪ್ರತಿ ವರ್ಷ ವಿಭಿನ್ನರಾಗಿರುವ ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿ ಉದ್ಯೋಗದಾತರು ಇದ್ದಾರೆ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್.ಬಸವನಗೌಡಪ್ಪ ತಿಳಿಸಿದರು.
ಜೆಎಸ್‌ಎಸ್ ಎಎಚ್‌ಇಆರ್ ನ ಬಯೋಟೆಕ್ನಾಲಜಿ ಮತ್ತು ಬಯೋ ಇನ್ಫಾರ್ಮೆಟಿಕ್, ಪರಿಸರ ವಿಜ್ಞಾನ, ಮೈಕ್ರೋ ಬಯಾಲಜಿ, ಆಹಾರ ಪೋಷಣಾ, ನೀರು ಮತ್ತು ಆರೋಗ್ಯ, ಸ್ಕೂಲ್ ಆಫ್ ಲೈಫ್ ಸೈನ್ಸಸ್ ವಿಭಾಗದಿಂದ ನಗರದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಶ್ರೀರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ‘ದೀಕ್ಷಾರಂಭ-2026’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಯಲ್ಲಿ ಬರೆದು ಮರೆತುಬಿಡುವ ಶಿಕ್ಷಣವು ನಿಜವಾದ ಕಲಿಕೆಯಲ್ಲ. ಪ್ರಸ್ತುತ ಜಗತ್ತಿಗೆ ಬೇಕಾಗಿರುವುದು ವೈಜ್ಞಾನಿಕ ಚಿಂತನೆ, ವಿಮರ್ಶಾತ್ಮಕ ಚಿಂತನೆ, ಕುತೂಹಲ, ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಕೌಶಲ. ಆದ್ದರಿಂದ ವಿದ್ಯಾರ್ಥಿಗಳು ಇವುಗಳನ್ನು ಬೆಳೆಸಿಕೊಳ್ಳುವತ್ತ ಹೆಜ್ಜೆ ಇಡಬೇಕು. ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದ ಸ್ವರೂಪ ಸಂಪೂರ್ಣ ಬದಲಾಗುತ್ತಿದೆ. ಕಳೆದ ವರ್ಷ ಪದವಿ ಪಡೆದ ವಿದ್ಯಾರ್ಥಿಗಿಂತ, ಈ ವರ್ಷದ ವಿದ್ಯಾರ್ಥಿಗಳು ವಿಭಿನ್ನರಾಗಿರಬೇಕು ಎಂಬ ನಿರೀಕ್ಷೆಯನ್ನು ಜಗತ್ತು ಇಟ್ಟುಕೊಳ್ಳುತ್ತಿದೆ ಎಂದರು.
ಪದವಿ ಕೇವಲ ಒಂದು ಅರ್ಹತೆಯಲ್ಲ. ಅದು ಮಾನವೀಯ ಮೌಲ್ಯಗಳನ್ನು ಬೆಳೆಸಲು, ಮಾನವ ಆರೋಗ್ಯ ಸುಧಾರಿಸಲು, ಪರಿಸರ ಸಂರಕ್ಷಿಸಲು, ಸಂಶೋಧನೆಯನ್ನು ಮುನ್ನಡೆಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಒಂದು ವೇದಿಕೆಯಾಗಿದೆ. ತರಗತಿಯಲ್ಲಿ ಕಲಿತು, ಪರೀಕ್ಷೆ ಬರೆದು, ಉತ್ತೀರ್ಣರಾಗಿ ಹೊರಡುವುದೇ ಶಿಕ್ಷಣವಲ್ಲ. ತರಗತಿಯಾಚೆಯ ಕಲಿಕೆಯೂ ಅಷ್ಟೇ ಮುಖ್ಯ. ಇಂದಿನ ಕಾಲದಲ್ಲಿ ಜ್ಞಾನವು ನಿಮ್ಮ ಕೈಯಲ್ಲಿರುವ ಮೊಬೈಲ್‌ನಲ್ಲೇ ಲಭ್ಯವಿದೆ. ಆದರೆ ಸರಿಯಾದ ಉತ್ತರ ಪಡೆಯಲು ನೀವು ಸರಿಯಾದ ಪ್ರಶ್ನೆಯನ್ನು ಕೇಳಬೇಕು ಎಂದರು.
ಮೊಬೈಲ್‌ಗಳಲ್ಲಿ ಇಂದಿನ ಜನ ಮುಳುಗಿದ್ದು, ಅರ್ಥವಿಲ್ಲದ ಸಂದೇಶಗಳನ್ನು ಮತ್ತೊಬ್ಬರಿಗೆ ಕಳುಹಿಸಲು ಬಳಸುತ್ತಾರೆ. ಆದರೆ ಮನಸ್ಸಿಗೆ ಶಾಂತಿ ನೀಡುವ ಅಥವಾ ಜೀವನಕ್ಕೆ ಉಪಯುಕ್ತವಾದ ಸಂದೇಶಗಳು ಬಹಳ ಕಡಿಮೆ. ಆದ್ದರಿಂದ ಮೊದಲು ಡಿಜಿಟಲ್ ತಂತ್ರಜ್ಞಾನ ದುರುಪಯೋಗಪಡಿಸಿಕೊಳ್ಳದೆ, ಸರಿಯಾದ ರೀತಿಯಲ್ಲಿ ಬಳಸುವುದನ್ನು ಕಲಿಯಬೇಕಿದೆ. ಇಂದು ಕೃತಕ ಬುದ್ಧಿಮತ್ತೆ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪ್ರವೇಶಿಸಿದೆ. ಆದರೆ ಅದನ್ನು ಹೇಗೆ ಜವಾಬ್ದಾರಿಯುತವಾಗಿ ಬಳಸಬೇಕು ಎಂಬುದು ಮುಖ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವನ್ನು ಸಂಪೂರ್ಣವಾಗಿ ಬಳಸಿಕೊಂಡು ಪ್ರಯೋಗಾಲಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಸಂಶೋಧನೆಯಲ್ಲಿ ತೊಡಗಬೇಕು. ವಿವಿಧ ವಿಭಾಗಗಳಲ್ಲಿ ಇಂಟರ್ನ್‌ಶಿಪ್ ಮಾಡಿ. ಕಾರ್ಯಾಗಾರಗಳು, ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ತಿಳಿಸಿದರು.
ಜೆಎಸ್‌ಎಸ್ ಎಎಚ್‌ಇಆರ್ ಕುಲಸಚಿವ ಡಾ.ಬಿ.ಮಂಜುನಾಥ, ಡೀನ್ ಅಕಾಡೆಮಿ ಡಾ.ವಿಶಾಲ ಕುಮಾರ್ ಗುಪ್ತ, ಸ್ಕೂಲ್ ಆಫ್ ಲೈಫ್ ಸೈನ್ಸಸ್ ಮುಖ್ಯಸ್ಥ ಡಾ.ಕೆ.ಎ.ರವೀಶ, ಕಾರ್ಯಕ್ರಮ ಸಂಯೋಜಕ ಡಾ.ಟಿ.ಎಸ್.ಗೋಪಿನಾಥ್ ಇತರರು ಇದ್ದರು.