ಮಾನಸ ಗಂಗೋತ್ರಿಯಲ್ಲಿ ಆಯೋಜಿಸಿದ್ದ ಬಸವ ಜಯಂತಿ ಹಾಗೂ ವಿಚಾರ ಸಂಕಿರಣವನ್ನು ಎಂ.ಕೆ.ಸವಿತಾ ಉದ್ಘಾಟಿಸಿದರು. ಪ್ರೊ.ಎನ್.ಕೆ. ಲೋಲಾಕ್ಷಿ, ಪ್ರೊ.ಕೆ. ಕೇಶವನ್ ಪ್ರಸಾದ್, ಮುಳ್ಳೂರು ನಂಜುಂಡಸ್ವಾಮಿ ಇದ್ದರು. 
ಮೈಸೂರು

ವಚನಗಳಲ್ಲಿ ಜೀವನ ಮಹತ್ವದ ಪಾಠ ಅಡಕ:ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ

ಪ್ರಮುಖ ಮುಖ್ಯಾಂಶಗಳು

  • ಬಸವಣ್ಣನವರು ತಮ್ಮ ವಿಚಾರಗಳನ್ನು ವಚನಗಳು ಎಂಬ ಕಾವ್ಯ ರೂಪದಲ್ಲಿ ಜನರಿಗೆ ತಲುಪಿಸಿದರು
  • ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ನಂಬಿದ್ದ ಬಸವಣ್ಣ
ಮೈಸೂರು:ವಚನಗಳು ಸರಳವಾದ ಭಾಷೆಯಲ್ಲಿದ್ದರೂ ಅವುಗಳಲ್ಲಿ ಆಳವಾದ ಅರ್ಥ ಮತ್ತು ಜೀವನ ಮಹತ್ವದ ಪಾಠಗಳಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ, ಅಧ್ಯಯನ ಹಾಗೂ ವಿಸ್ತರಣೆ ಕೇಂದ್ರದಿಂದ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರು ತಮ್ಮ ವಿಚಾರಗಳನ್ನು ವಚನಗಳು ಎಂಬ ಕಾವ್ಯ ರೂಪದಲ್ಲಿ ಜನರಿಗೆ ತಲುಪಿಸಿದರು. ಈ ವಚನಗಳು ಸರಳವಾದ ಭಾಷೆಯಲ್ಲಿದ್ದರೂ, ಅವುಗಳಲ್ಲಿ ಆಳವಾದ ಅರ್ಥ ಮತ್ತು ಜೀವನದ ಮಹತ್ವದ ಪಾಠಗಳಿವೆ ಎಂದರು.
ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಪ್ರಜಾಪ್ರಭುತ್ವ ಸಭೆಯಾಗಿತ್ತು. ಅಲ್ಲಿ ಎಲ್ಲ ವರ್ಗದ ಜನರು, ಮಹಿಳೆಯರು ಮತ್ತು ಹಿಂದುಳಿದ ವರ್ಗದವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ನಂಬಿದ್ದ ಬಸವಣ್ಣ, ಮಹಿಳೆಯರ ಶಿಕ್ಷಣ ಮತ್ತು ಸ್ವಾತಂತ್ರ್ಯ ಬೆಂಬಲಿಸಿದರು. ಆ ಕಾಲದಲ್ಲಿ ಇದು ಬಹಳ ದೊಡ್ಡ ಕ್ರಾಂತಿಯಾಗಿತ್ತು. ಬಸವಣ್ಣ ಅವರ ಈ ಚಿಂತನೆಗಳು ಇಂದಿನ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಮೂಲವಾಗಿದೆ ಎಂದರು.
ಇಂದಿನ ಸಮಾಜದಲ್ಲಿ ನಾವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳ ಅಭಿವೃದ್ಧಿ ಸಾಧಿಸಿದ್ದೇವೆ. ಆದರೆ, ಇನ್ನೂ ಕೆಲವು ಕಡೆಗಳಲ್ಲಿ ಅಸಮಾನತೆ, ಅನ್ಯಾಯ ಮತ್ತು ಅಂಧ ಶ್ರದ್ಧೆಗಳು ಕಂಡುಬರುತ್ತವೆ. ಇಂತಹ ಸಂದರ್ಭಗಳಲ್ಲಿ ಬಸವಣ್ಣನವರ ತತ್ವಗಳು ನಮಗೆ ದಾರಿ ತೋರಿಸುತ್ತವೆ. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಅಂತರ್ಜಾತಿ ವಿವಾಹ ಅಸ್ಪೃಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಅಂತರ್ಜಾತಿ ವಿವಾಹ ಭಾರತದಲ್ಲಿ ಸಾಮಾಜಿಕ ಬದಲಾವಣೆಯ ಒಂದು ಮುಖ್ಯ ಸಂಕೇತವಾಗಿದೆ. ಇದು ಜಾತಿ, ಭೇದವನ್ನು ಕಡಿಮೆ ಮಾಡುವುದಲ್ಲದೆ ಅಸ್ಪೃಶ್ಯತೆ ಹೋಗಲಾಡಿಸುವಲ್ಲಿ ಸಹಾಯಕವಾಗಿದೆ. ಆದರೆ, ಅಂತರ್ಜಾತಿ ವಿವಾಹ ದೊಡ್ಡ ಮಟ್ಟದಲ್ಲಿ ಆಚರಣೆಗೆ ಬರುವಲ್ಲಿ ಇನ್ನೂ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೆ.ಕೇಶವನ್ ಪ್ರಸಾದ್, ಮುಳ್ಳೂರು ನಂಜುಂಡಸ್ವಾಮಿ ಇದ್ದರು.