ನಂಜನಗೂಡಿನ ಎಪಿಎಂಸಿ ಆವರಣದಲ್ಲಿ ಮಾರುಕಟ್ಟೆ ಅಭಿವೃದ್ಧಿ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿದರು. ಕಳಲೆ ಕೇಶವಮೂರ್ತಿ, ಹುಲ್ಲಹಳ್ಳಿ ಮಾದಪ್ಪ, ಕಾರ್ಯದರ್ಶಿ ಮಹೇಶ್ ಇತರರು ಇದ್ದರು.
- ಶಾಸಕ ದರ್ಶನ್ ಧ್ರುವನಾರಾಯಣ ಹೇಳಿಕೆ
- ನಂಜನಗೂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸಭೆ
ನಂಜನಗೂಡು: ರೈತರಿಂದ ಖರೀದಿ ಮಾಡುವ ತರಕಾರಿಗಳಿಗೆ ಶೀಘ್ರದಲ್ಲಿ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಾರುಕಟ್ಟೆ ಅಭಿವೃದ್ಧಿ ಕುರಿತು ಸೋಮವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಈಗಾಗಲೇ ದಲ್ಲಾಳಿಗಳು ಹರಾಜು ಪ್ರಕ್ರಿಯೆ ನಡೆಸದೆ ನೇರವಾಗಿ ರೈತರಿಂದ ತರಕಾರಿಗಳನ್ನು ಖರೀದಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಪ್ರಸ್ತುತ ಎಪಿಎಂಸಿಗೆ ಆಡಳಿತ ಮಂಡಳಿ ಇಲ್ಲ. ಬದಲಿಗೆ ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
2025-26ನೇ ಸಾಲಿಗೆ ಮಾರುಕಟ್ಟೆ ಅಭಿವೃದ್ಧಿಗಾಗಿ 1 ಕೋಟಿ ರೂ.ಅನುದಾನದಲ್ಲಿ ಕುಡಿಯುವ ನೀರಿನ ಘಟಕ, ಜಾನುವಾರು ಪ್ರಾಂಗಣ, ಬೀದಿ ದೀಪಗಳ ವ್ಯವಸ್ಥೆ, ಹೈಮಾಸ್ಟ್ ದೀಪ, ಮಹಿಳೆಯರಿಗೆ ಶೌಚಗೃಹ, ಚರಂಡಿ ವ್ಯವಸ್ಥೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕಲ್ಪಿಸುವಂತೆ ಸೂಚಿಸಲಾಗಿದೆ ಎಂದರು.
ಈಗಾಗಲೇ ಎಪಿಎಂಸಿಯಲ್ಲಿ ಸಾಕಷ್ಟು ಮಳಿಗೆಗಳು ಖಾಲಿ ಉಳಿದಿವೆ. ಹಲವಾರು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲ. ಅಂತಹ ಇಲಾಖೆಗಳನ್ನು ಖಾಲಿ ಇರುವ ಕಟ್ಟಡಗಳಿಗೆ ಸ್ಥಳಾಂತರ ಮಾಡಲಾಗುವುದು. ಎಪಿಎಂಸಿಯಲ್ಲಿ ಸಾಕಷ್ಟು ಅನುದಾನವಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಆವರಣದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸರಿಯಾದ ರೀತಿಯಲ್ಲಿ ಅನುದಾನ ಬಳಸಿಕೊಳ್ಳುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ರೈತರಿಗೆ ಅನುಕೂಲವಾಗುವ ಯಾವುದೇ ಕೆಲಸಗಳನ್ನೂ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಪ್ರತಿ ಶುಕ್ರವಾರ ನಡೆಯುವ ಸಂತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗುತ್ತಿದ್ದು, ಸಂತೆ ದಿನ ಎಲ್ಲ ವಸ್ತುಗಳು ಒಂದೇ ಕಡೆ ದೊರೆಯುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಹುಲ್ಲಹಳ್ಳಿ ಮಾದಪ್ಪ, ಕಾರ್ಯದರ್ಶಿ ಮಹೇಶ್ ಇತರರು ಇದ್ದರು.