ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಿರಿಯ ಉದ್ಯಮಿ ವೇಣು ಶ್ರೀನಿವಾಸನ್ ಅವರು ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಜೆಎಸ್‌ಎಸ್ ಉಚಿತ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದೇವಾಲಯದ ಸ್ಥಪತಿಗಳಾದ ಶಂಕರ್, ಆಗಮಿಕರಾದ ಡಾ. ಮಲ್ಲಣ್ಣ ಇತರರಿದ್ದರು.  
ಮೈಸೂರು

ಸಂಸ್ಕಾರದ ಪಾಠವೂ ಬಹು ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ಟಿವಿಎಸ್ ಮೋಟಾರ್ ಕಂಪನಿ ಗೌರವಾಧ್ಯಕ್ಷ ವೇಣು ಶ್ರೀನಿವಾಸನ್
  • ಜೆಎಸ್‌ಎಸ್ ವಸತಿ ಶಾಲೆಯಲ್ಲಿ ಪ್ರಾರ್ಥನಾ ಸಭೆ

ನಂಜನಗೂಡು : ಶಾಲಾ ಶಿಕ್ಷಣದೊಂದಿಗೆ ಸಂಸ್ಕಾರದ ಪಾಠವೂ ಬಹು ಮುಖ್ಯಎಂದು ಟಿವಿಎಸ್ ಮೋಟಾರ್ ಕಂಪನಿ ಗೌರವಾಧ್ಯಕ್ಷ ವೇಣು ಶ್ರೀನಿವಾಸನ್ ಹೇಳಿದರು.

ಅವರು ಗುರುವಾರ ಸುತ್ತೂರು ಕ್ಷೇತ್ರಕ್ಕೆ ಆಗಮಿಸಿ ಜೆಎಸ್‌ಎಸ್ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಾರ್ಥನಾ
ಸಭೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು. ಸುತ್ತೂರು ಮಠದ ವಸತಿ ಶಾಲೆಯಲ್ಲಿ ಜಾತಿ, ಮತ, ಭೇದವಿಲ್ಲದೆ ನಾಡಿನ ವಿವಿಧ ಭಾಗದ ಸಹಸ್ರಾರು ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ಲಭಿಸುತ್ತಿದೆ. ಜೀವನಕ್ಕೆ ಅಗತ್ಯವಾದ ಶಿಸ್ತು, ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಕಾರ್ಯ ಇಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಮಕ್ಕಳು ಕಠಿಣ ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ದೇಶಕ್ಕೆ ಏನಾದರೂ ಕೊಡುಗೆ ನೀಡುವ ಪ್ರಜ್ಞಾವಂತರಾಗಬೇಕು.
ಮಠ ನೀಡುತ್ತಿರುವ ಸೌಲಭ್ಯ ಬಳಸಿಕೊಂಡವರು ದೇಶದ ಆಸ್ತಿಯಾಗಬೇಕು ಎಂದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇಶ ವಿದೇಶಗಳಲ್ಲಿ ಉದ್ಯಮ ಹೊಂದಿರುವ ವೇಣು ಶ್ರೀನಿವಾಸನ್ ಅವರು ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾಯಕದಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರೂ ಉದಾರತೆ ರೂಢಿಸಿಕೊಂಡಿರುವುದು ಮಹತ್ವದ ಸಂಗತಿ ಎಂದರು.
ಊಟಿ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಧನಪಾಲ್, ಟಿವಿಎಸ್ ಕಂಪನಿಯ ಅಧಿಕಾರಿಗಳಾದ ಜಯಣ್ಣ, ಶಾಂತಮಲ್ಲಪ್ಪ, ಶ್ರೀಧರ್, ದೇವಾಲಯದ ಸ್ಥಪತಿಗಳಾದ ಶಂಕರ್, ಆಗಮಿಕರಾದ ಡಾ. ಮಲ್ಲಣ್ಣ , ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ತ್ರಿಪುರಾಂತಕ ಇತರರು ಹಾಜರಿದ್ದರು.