- ದಸರಾ ಪರಂಪರೆ ಉಳಿಸಲು ಆಗ್ರಹ
- ಕಂಬಳ ಆಯೋಜನೆಗೆ ವಾಟಾಳ್ ನಾಗರಾಜ್ ವಿರೋಧ
- ಫುಟ್‌ಪಾತ್ ಒತ್ತುವರಿ ತೆರವಿಗೆ ಖಂಡನೆ
ಮೈಸೂರು: ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಹಾರ್ಡಿಂಜ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕಂಬಳಕ್ಕೆ ತನ್ನದೇ ಆದ ವಿಶಿಷ್ಟ ಮತ್ತು ಐತಿಹಾಸಿಕ ಮಹತ್ವವಿದೆ. ಅದು ದಕ್ಷಿಣ ಕನ್ನಡದ ಪ್ರಮುಖ ಆಚರಣೆಯಾಗಿದ್ದು, ಅದನ್ನು ಮೈಸೂರು ದಸರಾದಲ್ಲಿ ಆಯೋಜಿಸುವುದು ಸರಿಯಲ್ಲ.
ಮೈಸೂರು ದಸರಾಗೂ ತನ್ನದೇ ಆದ ಭವ್ಯ ಇತಿಹಾಸವಿದೆ. ದಸರಾ ಕೇವಲ ಅದರ ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಬೇಕು. ಜತೆಗೆ ಯುವ ದಸರಾ ಹೆಸರಿನಲ್ಲಿ ಪರಭಾಷೆಯ ಹಾಡುಗಾರರನ್ನು ಕರೆಸಿ ಪ್ರದರ್ಶನ ನೀಡುತ್ತಿರುವುದು ಸರಿಯಲ್ಲ. ಹೀಗಾಗಿ ದಸರಾ ಸಂಪ್ರದಾಯ, ಪರಂಪರೆ ಉಳಿಸಿ ಎಂದು ಆಗ್ರಹಿಸಿದರು.
ನಗರದಲ್ಲಿ ನಡೆಯುತ್ತಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಖಂಡಿಸಿದ ಅವರು, ಬಡ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶ್ರೀಮಂತರ ಪರವಾಗಿದ್ದಾರೆ. ಅವರಿಗೆ ಬಡವರ ಕಷ್ಟ ಗೊತ್ತಿಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯುವ ಮುನ್ನ ಬೆಂಗಳೂರಿನ ಸದಾಶಿವನಗರದಲ್ಲಿ ರಾಜಕಾರಣಿಗಳು ಮಾಡಿಕೊಂಡಿರುವ ಒತ್ತುವರಿಗಳನ್ನು ಮೊದಲು ತೆರವುಗೊಳಿಸಲಿ. ಕೂಡಲೇ ಫುಟ್‌ಪಾತ್ ವ್ಯಾಪಾರಿಗಳಿಗೆ ಪರ್ಯಾಯ ಜಾಗ ನೀಡಲಿ ಎಂದು ಒತ್ತಾಯಿಸಿದರು.