ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಗರದಲ್ಲಿ ಸಾರ್ವಜನಿಕರಿಗೆ ಉಪ್ಪಿನ ಪ್ಯಾಕೇಟ್ ವಿತರಿಸಿ ವಿನೂತನವಾಗಿ ಪ್ರತಿಭಟಿಸಿದರು. ಮೂಗೂರು ನಂಜುಂಡಸ್ವಾಮಿ, ಶಿವಶಂಕರ್ ಇನ್ನಿತರರಿದ್ದರು. 
ಮೈಸೂರು

ವಾಟಾಳ್ ನಾಗರಾಜ್ ಪ್ರತಿಭಟನೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ದಿನ ಬಳಕೆ ವಸ್ತುಗಳ ಬೆಲೆ ಏರಿಕೆಗೆ ಆಕ್ರೋಶ
ಮೈಸೂರು: ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದಲ್ಲಿ ಭಾನುವಾರ ಪ್ರತಿಭಟಿಸಿದರು.
ತಳ್ಳುವ ಗಾಡಿಯಲ್ಲಿ ಉಪ್ಪಿನ ಪ್ಯಾಕೆಟ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಮೂಲಕ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
 ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದರೆ, ಬಿಜೆಪಿಯವರು ನಾವೇ ಸತ್ಯಹರಿಶ್ಚಂದ್ರರು ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನೂ ಜೆಡಿಎಸ್‌ನವರು ಮಹಾಮಹಿಮ ಸತ್ಯಹರಿಶ್ಚಂದ್ರನಿಗೆ ನಮ್ಮ ಮನೆ ಪಕ್ಕದಲ್ಲೇ ಜಾಗ ಕೊಟ್ಟಿದ್ದೀವಿ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.
ಇವರೆಲ್ಲರ ಕಚ್ಚಾಟದ ನಡುವೆ ನೀರು ಕುಡಿಯಲು ಬಡವರು ಪರದಾಡುವಂತಾಗಿದೆ. ರಾಜ್ಯ ಸರ್ಕಾರದ ಸ್ಥಿತಿ ಡೋಲಾಯಮಾನವಾಗಿದೆ. ಎರಡು ಹೊತ್ತು ಊಟ ಮಾಡುತ್ತಿದ್ದವರು ಒಂದೊತ್ತಿನ ಊಟಕ್ಕೂ ಕಷ್ಟ ಪಡುವಂತಾಗಿದೆ. ಹೀಗಾಗಿ,  ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಮಾಡಿದಂತೆ ನಾವು ಕೂಡ ಜನರಿಗೆ ಅಗತ್ಯವಾದ ಉಪ್ಪನ್ನು ಉಚಿತವಾಗಿ ನೀಡುವ ಮೂಲಕ ಬೆಲೆ ಏರಿಕೆಯನ್ನು ಖಂಡಿಸುತ್ತಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಮತ್ತು ಅಕ್ಕಿ ಕೊಟ್ಟರೆ ಸಾಲದು. ಇತರ ಆಹಾರ ಪದಾರ್ಥಗಳ ಬೆಲೆ ಕಡಿಮೆ ಮಾಡಬೇಕು. ಜನ ಜೀವನ ಉತ್ತಮ ಪಡಿಸಬೇಕು. ಯುವ ಜನತೆಗೆ ಉದ್ಯೋಗ ನೀಡಬೇಕು. 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಗ್ರಾಮೀಣ ಭಾಗದವರಿಗೆ ಮತ್ತು ಕನ್ನಡಿಗರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಶಿವಶಂಕರ್ ಇತರರಿದ್ದರು.