ರಾಜ್ಯದಲ್ಲಿ ಎಂಇಎಸ್ ರದ್ದು ಪಡಿಸುವಂತೆ ಒತ್ತಾಯಿಸಿ ವಾಟಾಳ್ ಪಕ್ಷದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ವಾಟಾಳ್ ನಾಗರಾಜ್, ಮೂಗೂರು ನಂಜುಂಡಸ್ವಾಮಿ, ಬಿ.ಎ. ಶಿವಶಂಕರ್, ಮಹದೇವಸ್ವಾಮಿ ಇತರರು ಇದ್ದರು. 
ಮೈಸೂರು

ಎಂಇಎಸ್ ನಿಷೇಧಿಸಲು ಆಗ್ರಹಿಸಿ ವಾಟಾಳ್ ನಾಗರಾಜ್ ರಿಂದ ತಮಟೆ, ಬ್ಯಾಂಡ್ ಬಾರಿಸಿ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಕೂಡಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರದ್ದು ಮಾಡಲೇಬೇಕು
  • ಇಲ್ಲವಾದರೆ ಎಂಇಎಸ್ ಕಾರ್ಯಾಲಯಕ್ಕೆ ನುಗ್ಗುತ್ತೇವೆ
ಮೈಸೂರು: ಕರ್ನಾಟಕದಲ್ಲಿ ಮಹಾರಾಷ್ಟ ಏಕೀಕರಣ ಸಮಿತಿಯನ್ನು (ಎಂಇಎಸ್) ರದ್ದು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ನಗರದಲ್ಲಿ ತಮಟೆ, ಬ್ಯಾಂಡ್ ಬಾರಿಸುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜ(ಹಾರ್ಡಿಂಜ್) ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ರಾಜ್ಯದಲ್ಲಿ ಅಶಾಂತಿ ಉಂಟುಮಾಡುತ್ತಿರುವ ಎಂಇಎಸ್ ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಈ ವೇಳೆ ಎಂಇಎಸ್ ಪೋಸ್ಟರ್‌ಅನ್ನು ಕಾರ್ಯಕರ್ತರು ಸುಡಲು ಮುಂದಾದಾಗ ಪೊಲೀಸರು ತಡೆದರು. ಹಾಗಾಗಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.
ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಎಂಇಎಸ್ ಕನ್ನಡ, ಕರ್ನಾಟಕ ವಿರೋಧಿಯಾಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕೂಡಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರದ್ದು ಮಾಡಲೇಬೇಕು ಎಂದು ಆಗ್ರಹಿಸಿದರು.
ಜನವರಿ 15ಕ್ಕೆ ಬೆಳಗಾವಿಗೆ ಹೋಗುತ್ತೇವೆ. ಅಲ್ಲಿ ಎಂಇಎಸ್ ನಾಮಫಲಕ ಕಿತ್ತು ಹಾಕುತ್ತೇವೆ. ಗಡಿಪಾರು ಮಾಡುವಂತೆ ಹೇಳುತ್ತೇವೆ. ಎಂಇಎಸ್ ಕಾರ್ಯಾಲಯಕ್ಕೆ ನುಗ್ಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಎಂಇಎಸ್ ರದ್ದು ಮಾಡುವುದಾಗಿ ಹೇಳಿ ಮಾತು ತಪ್ಪಿದರು. ಅವರಿಗೆ ಶಕ್ತಿ, ಧೈರ್ಯ ಇರಲಿಲ್ಲ. ಹಿಂದೆಯೂ ಯಾರೂ ರದ್ದು ಮಾಡಲಿಲ್ಲ. ಕನ್ನಡ ಕಾವಲು ಸಮಿತಿ ಅಧ್ಯಕ್ಷರೂ ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತೀರ್ಮಾನ ಮಾಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಲಿಲ್ಲ. ಕೆ.ಎನ್.ರಾಜಣ್ಣ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಒಂದೊಂದು ದಿನ ಊಟ ಹಾಕಿಸಿದರು. ಈ ಊಟದಲ್ಲೇ ಅಧಿವೇಶನ ಮುಗಿಯಿತು. ಅಧಿವೇಶನ ಸಂಪೂರ್ಣ ವಿಫಲವಾಯಿತು. ಉತ್ತರ ಕರ್ನಾಟಕದ ಬಗ್ಗೆ ಸಮಗ್ರ ಆಗಲಿಲ್ಲ. ಇದಕ್ಕೆ ಪ್ರತಿಪಕ್ಷಗಳೂ ಕಾರಣ. ಅದ್ದರಿಂದ ಈ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಬೆಳಗಾವಿಯನ್ನು ವಿಭಾಗ ಮಾಡಬೇಕು ಎಂದು ಕೆಲವರು ಹೊರಟಿದ್ದಾರೆ. ಅದಕ್ಕೆ ನಾವು ಬಿಡುವುದಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟ್‌ಲ್ಲಿದೆ. ನ್ಯಾಯಾಲಯದಲ್ಲಿ ಸರ್ಕಾರ ಸಮರ್ಥವಾಗಿ ವಾದ ಮಂಡಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ಬಿ.ಎ. ಶಿವಶಂಕರ್, ಮಹದೇವಸ್ವಾಮಿ ಇತರರು ಇದ್ದರು.
50 ಲಕ್ಷ ರೂ ಪರಿಹಾರಕ್ಕೆ ಆಗ್ರಹ:
ಅರಮನೆ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ವಾಟಾಳ್ ನಾಗರಾಜ್ ಸರ್ಕಾರವನ್ನು ಆಗ್ರಹಿಸಿದರು.
ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಮೈಸೂರಿಗೆ ಜಗತ್ತಿನಲ್ಲಿಯೇ ಹೆಸರಿದ್ದು, ಅದರ ಹೆಸರು ಹಾಳು ಮಾಡಬೇಡಿ. ಸರ್ಕಾರ ಅಭಿವೃದ್ಧಿಗೂ ಹೆಚ್ಚಿನ ಅನುದಾನ ಕೊಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮೈಸೂರಿಗೆ ಕಳಂಕ ಅಂಟಿಕೊಳ್ಳುತ್ತಿದೆ. ಡ್ರಗ್ಸ್ ಫ್ಯಾಕ್ಟರಿ ಪತ್ತೆಗೆ ಮಹಾರಾಷ್ಟದ ಪೊಲೀಸರು ಬರಬೇಕಾಯಿತು. ಇದರಿಂದ ನಮ್ಮ ಪೊಲೀಸರಿಗೆ ಕೆಟ್ಟ ಹೆಸರು ಬಂದಿತ್ತು. ನಮ್ಮ ಸುಂದರ ನಗರವನ್ನು ಹಾಳಾಗಲು ಬಿಡಬಾರದು ಎಂದು ಕೋರಿದರು.