ಪಿರಿಯಾಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಪಿರಿಯಾಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. 
ಮೈಸೂರು

ಪಿರಿಯಾಪಟ್ಟಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಎಂ.ರವಿ
ಪಿರಿಯಾಪಟ್ಟಣ: ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ಮಹದೇಶ್ವರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದೇವಾಲಯದ ಆವರಣವನ್ನು ತುಳಸಿ, ಮಲ್ಲಿಗೆ, ಚೆಂಡು ಹೂವು, ಸೇವಂತಿಗೆ ಸೇರಿದಂತೆ ವಿಶೇಷ ಹೂವುಗಳ ಅಲಂಕಾರದಿಂದ ಶೃಂಗರಿಸಲಾಗಿತ್ತು. ಕೊರೆವ ಚಳಿಯನ್ನೂ ಲೆಕ್ಕಿಸದೆ ಮುಂಜಾನೆಯಿಂದಲೇ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಸರದಿ ಸಾಲಿನಲ್ಲಿ ನಿಂತು ದೇವಾಲಯದಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರವನ್ನು ಪ್ರವೇಶಿಸಿ ದೇವರ ದರ್ಶನ ಪಡೆದರು. ವೈಕುಂಠ ಏಕಾದಶಿಯ ಅಂಗವಾಗಿ ವೆಂಕಟರಮಣ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಹೋಮ ಅಭಿಷೇಕಗಳನ್ನು ನೆರವೇರಿಸಲಾಯಿತು.
ದೇವರ ದರ್ಶನ ಮಾಡಿ ಬಂದ ಭಕ್ತರಿಗೆ ಪ್ರಸಾದವಾಗಿ ಸಜ್ಜಿಗೆ, ಉಪ್ಪಿಟ್ಟು ಹಾಗೂ ನವಣೆ ಬಾತ್ ನೀಡಲಾಯಿತು.
ವಿಜಯವಾಣಿಯೊಂದಿಗೆ ಮಾತನಾಡಿದ ತಾಲೂಕು ಯಾದವ (ಗೊಲ್ಲರ) ಸಂಘದ ಅಧ್ಯಕ್ಷ ಪಿ.ಡಿ.ಪ್ರಸನ್ನ ನಮ್ಮ ಪೂರ್ವಜರು ಹಲವು ವರ್ಷಗಳ ಹಿಂದಿನಿಂದಲೂ ಪಟ್ಟಣದ ಒಳಭಾಗದಲ್ಲಿರುವ ಪುರಾತನ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಆಚರಿಸಿಕೊಂಡು ಬರುತ್ತಿದ್ದು, ಇದೀಗ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಬೆಳಗ್ಗೆ ವೈಕುಂಠ ದ್ವಾರ ತೆರೆದು ಅಷ್ಟಾವಧಾನ ಸೇವೆ ನಡೆಸಲಾಗಿದೆ, ಸಂಜೆ ಪುಷ್ಪಯಾಗ, ಅಷ್ಟಾವಧಾನ ನಡೆಯಲಿದೆ ಎಂದರು. ಹೊರಕಾಣಿಕೆಯಲ್ಲಿ ಒಂಬತ್ತು ಬಗೆಯ 200 ಬುಟ್ಟಿ ಹೂ ತಂದು ದೇವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಸುರೇಶ್, ಗೌರವಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಸೋಮಣ್ಣ, ಖಜಾಂಜಿ ಸತ್ಯನಾರಾಯಣ, ಸಹ ಕಾರ್ಯದರ್ಶಿ ರೇವಣ್ಣ, ಸಮಿತಿಯ ನಿರ್ದೇಶಕರಾದ ಪಿ.ಕೆ ವೆಂಕಟೇಶ್, ತೇಜಸ್, ವೆಂಕಟೇಶ್ ಅಂಕನಹಳ್ಳಿ, ಸಂತೋಷ್, ಕೆ.ವೆಂಕಟೇಶ್, ಭಾಸ್ಕರ್, ಸಮಿತಿಯ ಸದಸ್ಯರಾದ ಗುರುರಾಜ್, ಕುಮಾರ್, ರವಿಕುಮಾರ್, ಕೆ.ಮಂಜುನಾಥ್, ಮಹದೇವ್, ಗಣೇಶ್, ನಿತಿನ್, ಶಶಿಕುಮಾರ್, ಚಿಕುಮಂಜುನಾಥ, ದೇವರಾಜ್, ಗಿರೀಶ್, ಸುಬ್ರಹ್ಮಣ್ಯ, ಮಹೇಂದ್ರ, ದೇವರಾಜ್, ಯೋಗೇಶ್, ಪ್ರಧಾನ ಅರ್ಚಕ ಸುದರ್ಶನ್, ದೇವಸ್ಥಾನದ ಅರ್ಚಕ ಪದ್ಮಾ ಚಲುವರಾಜು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.