ಕರ್ನಾಟಕದ ಏಕತೆ ಮತ್ತು ಅಖಂಡತೆಗೆ ಧಕ್ಕೆಯಾಗುವ ಯಾವುದೇ ಪ್ರಯತ್ನಗಳಿಗೆ ಅವಕಾಶ ನೀಡದೆ, ಸಂಬಂಧಪಟ್ಟವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಿನ್ನಾಭಿಪ್ರಾಯಗಳನ್ನು ನಿವಾರಿಸಬೇಕು ಎಂದು ಸಾಹಿತಿ ಡಾ.ಕೆ.ಅನಂತರಾಮು ಸಲಹೆ ನೀಡಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕೊಡವರು ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಡುವುದು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರತ್ಯೇಕತೆಯ ಧ್ವನಿ ಕೇಳಿ ಬರುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಇಂತಹ ಅಪಸ್ವರಗಳಿಗೆ ಬೆಲೆ ನೀಡದೆ, ಸಂಬಂಧಪಟ್ಟವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ನಿವಾರಿಸಬೇಕು ಎಂದರು.
ಕನ್ನಡ ನಾಡು ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ರಂಗಭೂಮಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ವಿಶಿಷ್ಟ ಹಿರಿಮೆ ಹೊಂದಿದೆ. ಸಂಗೀತ ಕ್ಷೇತ್ರದಲ್ಲಿ ಪುರಂದರದಾಸರು ಮೂಲಪುರುಷರಾಗಿದ್ದು, ವೀಣೆ, ನೃತ್ಯ ಹಾಗೂ ರಂಗಕಲೆಗಳಲ್ಲಿ ಕನ್ನಡಿಗರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ ಗೊಮ್ಮಟೇಶ್ವರ ಮೂರ್ತಿ ನಮ್ಮ ಶಿಲ್ಪಕಲೆಯ ವೈಭವಕ್ಕೆ ಸಾಕ್ಷಿಯಾಗಿದೆ ಎಂದರು.
ಹಳ್ಳಿ ಹಳ್ಳಿಗಳಲ್ಲಿಯೂ ಕಲೆ ಮತ್ತು ಸಂಸ್ಕೃತಿ ಜೀವಂತವಾಗಿವೆ. ಜಗತ್ತಿನಲ್ಲಿ ಯಾವುದೇ ಹೊಸತನ ಬಂದರೂ ಅದನ್ನು ಸ್ವೀಕರಿಸಿ ತಮ್ಮದಾಗಿಸಿಕೊಳ್ಳುವ ಶಕ್ತಿ ಕನ್ನಡಿಗರಲ್ಲಿದೆ. ಚಲನಚಿತ್ರ ಕ್ಷೇತ್ರದಲ್ಲಿಯೂ ಕನ್ನಡ ಚಿತ್ರರಂಗ ಸಾಮರ್ಥ್ಯವನ್ನು ತೋರಿಸಿದ್ದು, ಕಾಂತಾರ ಚಿತ್ರದ ಮೂಲಕ ಕನ್ನಡದ ಕಲೆ, ಸಂಸ್ಕೃತಿ ಮತ್ತು ಪರಂಪರೆ ಜಾಗತಿಕ ಮಟ್ಟದಲ್ಲಿ ಮೊಳಗಿದೆ. ಮೈಸೂರು ಮಹಾರಾಜರ ಕಾಲದಿಂದಲೂ ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಬಣ್ಣಿಸಿದರು.
ಕನ್ನಡಿಗರು ಜಗತ್ತಿನ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ, ನೆಲ, ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯಬಾರದು. ನವೋದಯ, ನವ್ಯ ಸೇರಿದಂತೆ ಕನ್ನಡ ಸಾಹಿತ್ಯದಲ್ಲಿ ಹಲವು ವಿಶಿಷ್ಟ ಸಾಹಿತ್ಯ ಚಳವಳಿಗಳು ರೂಪುಗೊಂಡಿವೆ. ಸದ್ವಿಚಾರ, ನೀತಿ ಮತ್ತು ಶ್ರೇಯಸ್ಸಿಗೆ ಆದ್ಯತೆ ನೀಡುವ ಪರಂಪರೆ ನಮ್ಮ ನಾಡಿನದ್ದಾಗಿದೆ ಎಂದರು.
ಕನ್ನಡದ ಅಸ್ಮಿತೆ ಉಳಿಸಿ:
ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಮಾತನಾಡಿ, ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಕನ್ನಡಿಗನಿಗೂ ಜವಾಬ್ದಾರಿಯಿದೆ. ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ, ಕನ್ನಡದ ಭಾಷೆ ಮತ್ತು ಪರಂಪರೆಯನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ಉದ್ಯಮ, ವಾಣಿಜ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು. ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡು ಆರ್ಥಿಕ ಹಾಗೂ ಔದ್ಯೋಗಿಕ ಪ್ರಗತಿಯತ್ತ ಸಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉದ್ಯಮಿ ಕುಮಾರ್ ಅವರಿಗೆ ‘ಕೈಗಾರಿಕಾ ರತ್ನ’ ಪ್ರಶಸ್ತಿಯನ್ನು, ಎಪಿಎಂಸಿ ವರ್ತಕ ಎಂ.ಎನ್.ಬಸವರಾಜು ಅವರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ಹಾಗೂ ಟ್ರಾವೆಲ್ ಪಾರ್ಕ್ನ ಜಯಕುಮಾರ್ ಅವರಿಗೆ ‘ವಾಣಿಜ್ಯ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಆರ್.ಆನಂದ್, ಖಜಾಂಚಿ ಎಸ್.ಜೆ.ಅಶೋಕ್, ಕಾರ್ಯದರ್ಶಿ ಎ.ಕೆ.ಶಿವಾಜಿರಾವ್ ಇದ್ದರು.