ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪಂ.ಪುಟ್ಟರಾಜ ಗವಾಯಿ ಮತ್ತು ಡಾ.ಗಂಗೂಬಾಯಿ ಹಾನಗಲ್ ಅವರ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ರಾಮಕೃಷ್ಣಯ್ಯ ಉದ್ಘಾಟಿಸಿದರು.
- ಸಂಗೀತ ವಿವಿ ಕುಲಪತಿ ಪ್ರೊ.ಕೆ.ರಾಮಕೃಷ್ಣಯ್ಯ ಹೇಳಿಕೆ
- ಪುಟ್ಟರಾಜ ಗವಾಯಿ, ಗಂಗೂಬಾಯಿ ಹಾನಗಲ್ ಜನ್ಮದಿನೋತ್ಸವ
ಮೈಸೂರು: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ ಪ್ರತಿ ತಿಂಗಳು ವಿವಿಧ ಪ್ರದರ್ಶಕ ಕಲೆಗಳ ಪ್ರಸ್ತುತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಎಂದು ಕುಲಪತಿ ಪ್ರೊ.ಕೆ.ರಾಮಕೃಷ್ಣಯ್ಯ ಹೇಳಿದರು.
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪಂ.ಪುಟ್ಟರಾಜ ಗವಾಯಿ ಮತ್ತು ಡಾ.ಗಂಗೂಬಾಯಿ ಹಾನಗಲ್ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಯನ ಸಂಗೀತ, ವಾದ್ಯಗಳ, ನೃತ್ಯ, ರಂಗಭೂಮಿ ಕಲಾ ವಿಭಾಗದವರು ಒಂದೊಂದು ತಿಂಗಳು ಕಾರ್ಯಕ್ರಮದ ನಿರ್ವಹಣೆ ಮಾಡುತ್ತಾರೆ. ಆಯಾಯ ವಿಭಾಗದ ಗುರುವಿನ ಸ್ಥಾನದಲ್ಲಿರುವ ಉಪನ್ಯಾಸಕರು, ಸಂದರ್ಶನಕ ಉಪನ್ಯಾಸಕರು, ಕಲಿಯುತ್ತಿರುವ ವಿದ್ಯಾರ್ಥಿಗಳೇ ಈ ಪ್ರದರ್ಶನ ನೀಡಲಿದ್ದು, ಇದಕ್ಕೆ ಅಗತ್ಯ ಮೂಲ ಸೌಕರ್ಯ, ಉತ್ತೇಜನವನ್ನು ವಿವಿಯಿಂದ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ನಮ್ಮ ವಿವಿಯ ಗುರುಗಳು ರಾಷ್ಟ್ರ, ರಾಜ್ಯಮಟ್ಟದ ಕಲಾವಿದರನ್ನು ಸೃಷ್ಟಿ ಮಾಡಬೇಕು. ಇಂತಹ ಜವಾಬ್ದಾರಿ ಇಲ್ಲಿರುವ ಗುರುಗಳ ಮೇಲಿದೆ. ಇದನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದರು.
ಪುಟ್ಟರಾಜ ಗವಾಯಿ, ಗಂಗೂಬಾಯಿ ಹಾನಗಲ್ ಅವರಿಬ್ಬರು ಶಾಸ್ತ್ರೀಯ ಸಂಗೀತ ಲೋಕದ ಧ್ರುವತಾರೆಯರು. ಸಾಮಾನ್ಯ ಕುಟುಂಬದಿಂದ ಬಂದಂತಹ ಈ ಮಹನೀಯರು ದೊಡ್ಡ ಸಾಧನೆ ಮಾಡುವ ಮೂಲಕ ಇಡೀ ಸಂಗೀತ ಜಗತ್ತು ಕರ್ನಾಟಕದತ್ತ ನೋಡುವಂತೆ ಮಾಡಿದವರು.
ಈಗಿನ ಯುವ ಸಂಗೀತ ಕಲಾವಿದರು ಇವರು ತೋರಿದ ದಾರಿಯಲ್ಲಿ ಸಾಗಬೇಕು ಎಂದು ಕಿವಿ ಮಾತು ಹೇಳಿದರು.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಮುಖ, ಪ್ರಭಾವಶಾಲಿಯಾಗಿರುವ ಕಿರಾಣಾ ಘರಾನಾ ಶೈಲಿಯಲ್ಲಿ ಬೆರಗು ಮೂಡಿಸಿದವರು ಗಂಗೂಬಾಯಿ. ಸ್ವರಗಳ ನಿಖರತೆ, ಭಾವಪೂರ್ಣ ಆಲಾಪನೆ, ನಿಧಾನಗತಿಯ ಖಯಾಲ್ ಗಾಯನಕ್ಕೆ ಹೆಸರುವಾಸಿಯಾಗಿರುವ ಘರಾನಾ ಎಂಬ ಗಂಡಿನ ಧ್ವನಿಯಲ್ಲಿ ಇವರು ಮಿಂಚಿದವರು.
ಅವರ ಹೆಸರಿನಲ್ಲಿರುವ ಈ ವಿವಿ ವಿದ್ಯಾರ್ಥಿಗಳು ಸಹ ಸಾಧನೆ ಮಾಡುವ ಮೂಲಕ ಅವರಿಗೆ ಹೆಸರು ತರಬೇಕು ಎಂದರು.
ಪಂಡಿತ ಪುಟ್ಟರಾಜ ಗವಾಯಿ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಭಕ್ತರ ಪಾಲಿಗೆ ನಡೆದಾಡುವ ದೇವರು ಎಂದೆನಿಸಿದ್ದವರು. ಅಂಧರಾಗಿದ್ದರೂ ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಹಾರ್ಮೋನಿಯಂ ಕಲಿಯುವ ಮೂಲಕ ಸಂಗೀತ ಸಾಮ್ರಾಟ್ ಎಂಬ ಕೀರ್ತಿಗೆ ಭಾಜನರಾದವರು. ಗಾಯನವಷ್ಟೇ ಅಲ್ಲದೆ ಸಂಗೀತ ಲೋಕದ ಅನೇಕ ವಾದ್ಯಗಾರಿಕೆಯಲ್ಲೂ ಅವರಿಗೆ ಅಪ್ರತಿಮ ಸಾಧನೆ ಮಾಡಿದವರು ಎಂದು ಹೇಳಿದರು.
ಬಳಿಕ ಹಿಂದೂಸ್ತಾನಿ ಗಾಯಕರಾದ ಶಾರದಾ ಭಟ್, ಗೋಪಾಲ್ ರಾಯಚೂರು ಅವರು ಸಂಗೀತ ಕಛೇರಿ ನಡೆಸಿಕೊಟ್ಟರು. ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್, ಹಣಕಾಸು ಅಧಿಕಾರಿ ಸಿ.ಪಿ.ಸೌಮ್ಯಶ್ರೀ, ಅತಿಥಿ ಉಪನ್ಯಾಸಕಿ ಡಾ.ಪಾರ್ವತಿ ಜೋಡಿ ಇದ್ದರು.