ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಲತಾ ರಾಜಶೇಖರ್ ಪುಸ್ತಕ ಬಿಡುಗಡೆ ಮಾಡಿದರು. ಮಡ್ಡೀಕೆರೆ ಗೋಪಾಲ್, ಡಾ.ವೈ.ಡಿ. ರಾಜಣ್ಣ, ಎಂ.ಬಿ. ಸಂತೋಷ್,ಬಿ. ಶೋಭಾ, ಸೌಗಂಧಿಕಾ ವಿ. ಜೋಯಿಸ್, ಕೆ. ಪರಮೇಶ ಇತರರು ಇದ್ದರು.
- ಜಗತ್ತು ಬದಲಾಗುತ್ತಿದ್ದು, ಮೌಲ್ಯಗಳು ವಿನಾಶವಾಗುತ್ತಿವೆ
- ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳು ಮೌಲ್ಯ ಮತ್ತು ಸಿದ್ಧಾಂತಗಳನ್ನು ತಿಳಿಸಿಕೊಡುತ್ತವೆ
- ಶಿಕ್ಷಣದ ಜತೆಗೆ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ಅಗತ್ಯವಾಗಿವೆ
ಮೈಸೂರು: ಕಾಣದ ಜಗತ್ತನ್ನು ಪರಿಚಯಿಸುವ ಸಾಹಿತ್ಯವನ್ನು ಮರೆಯುತ್ತಿದ್ದೇವೆ ಎಂದು ಸಾಹಿತಿ ಡಾ.ಲತಾ ರಾಜಶೇಖರ್ ಬೇಸರ ವ್ಯಕ್ತಪಡಿಸಿದರು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನನಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಭವನದಲ್ಲಿ ಭಾನುವಾರ ಆಯೋಜಿಸಿದ್ದ 20ನೇ ವಾರ್ಷಿಕೋತ್ಸವ, ಸೌಗಂಧಿಕಾ ವಿ. ಜೋಯಿಸ್ ಅವರ ತನಿಗಂಧ ಹಾಗೂ ಕೆ. ಪರಮೇಶ ಅವರ ಸಾಕವ್ವನ ಸಾಂಗತ್ಯ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಜಗತ್ತು ಬದಲಾಗುತ್ತಿದ್ದು, ಮೌಲ್ಯಗಳು ವಿನಾಶವಾಗುತ್ತಿವೆ. ಬಂಡವಾಳ, ಹಣ ಮನುಷ್ಯತ್ವವನ್ನು ಕಡಿಮೆ ಮಾಡುತ್ತಿದೆ. ಇಂದು ಕಾಣುವ ಜಗತ್ತಿಗಿಂತ ಕಾಣದ ಜಗತ್ತನ್ನು ನಾವೆಲ್ಲರೂ ಮರೆಯುತ್ತಿದ್ದೇವೆ. ಕಾಣದ ಜಗತ್ತನ್ನು ಪರಿಚಯಿಸುವುದು ಸಾಹಿತಿಗಳ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.
ಭಾಷೆ ಮತ್ತು ಸಾಹಿತ್ಯಕ್ಕೆ ನಿಕಟ ಸಂಬಂಧವಿದೆ. ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳು ಮೌಲ್ಯ ಮತ್ತು ಸಿದ್ಧಾಂತಗಳನ್ನು ತಿಳಿಸಿಕೊಡುತ್ತವೆ. ಈ ಮೂಲಕ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಕಾಣಿಕೆ ನೀಡಿದ್ದಾರೆ ಎಂದರು.
ಸಾಕಷ್ಟು ಲೇಖಕರು ತಮ್ಮ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಒಳ್ಳೆಯ ಸಮಾಜ ಸೃಷ್ಟಿ ಮಾಡುವಲ್ಲಿ ಶಿಕ್ಷಣದ ಜತೆಗೆ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ಅಗತ್ಯವಾಗಿವೆ, ಎಂದು ಹೇಳಿದರು.
ಕವಿ ಸಿದ್ದಲಿಂಗಪ್ಪ ಬೀಳಗಿ ಮಾತನಾಡಿ, ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಅಶಾಶ್ವತವಾದ ಜಗತ್ತಿನಲ್ಲಿ ಶಾಶ್ವತವಾದುದನ್ನು ಹುಡುಕಬೇಕು. ಅದುವೇ ಸಾಹಿತ್ಯದ ಕೆಲಸ. ಸಾಹಿತ್ಯ ಜನರ ಒಳಗಣ್ಣು ತೆರೆಸುವಂತಿರಬೇಕು. ಸಾಹಿತ್ಯ ಎಂದರೆ ಪತ್ರಿಕೆ, ಪಠ್ಯಪುಸ್ತಕ ಓದಿದಂತಲ್ಲ. ಒಳಗಣ್ಣಿನಿಂದ ನೋಡುವವರಿಗೆ ಸೂಕ್ಷ್ಮ ವಿಚಾರಗಳು ಗೋಚರವಾಗುತ್ತವೆ. ಹೀಗೆ ಗೋಚರವಾಗುವ ಅನೇಕ ಸೂಕ್ಷ್ಮ ವಿಷಯಗಳು ನಮ್ಮ ಬದುಕನ್ನು ಸುಂದರಗೊಳಿಸುತ್ತವೆ ಎಂದು ತಿಳಿಸಿದರು.
ಕವಯಿತ್ರಿ ಬಿ. ಶೋಭಾ ಮಾತನಾಡಿ, ಮನುಷ್ಯನಿಗೆ ನ್ಯಾಯ, ನೀತಿ, ಧರ್ಮ ಯಾವುದೂ ಬೇಡವಾಗಿದೆ. ಅದನ್ನು ಪಾಲಿಸುವವರ ಸಂಖ್ಯೆ ವಿರಳವಾಗುತ್ತಿರುವುದು ವಿಷಾದನೀಯ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಾಹಿತ್ಯ ಲೋಕ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಸಂತೋಷ್, ಉಪಾಧ್ಯಕ್ಷೆ ಸೌಗಂಧಿಕ ಜೋಯಿಸ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಡಾ.ಸಿ. ವಾಣಿ ರಾಘವೇಂದ್ರ, ಕನ್ನಡ ಸಹಾಯಕ ಪ್ರಾಧ್ಯಾಪಕ ಕೆ. ಪರಮೇಶ, ರೂಪಶ್ರೀ ಇತರರು ಇದ್ದರು.