ವೈಕುಂಠ ಏಕಾದಶಿಯ ಪ್ರಯುಕ್ತ ಮೈಸೂರಿನ ವಿಜಯನಗರದ ಯೋಗ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. 
ಮೈಸೂರು

ಮೈಸೂರಿನಲ್ಲಿ ವೈಕುಂಠ ಏಕಾದಶಿ : ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇ ರಿತು. ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುವ ಮೂಲಕ ಪುನೀತರಾದರು.
ವಿಷ್ಣು ತನ್ನ ಅವತಾರ ಸಮಾಪ್ತಿಗೊಳಿಸಿ ವೈಕುಂಠಕ್ಕೆ ತೆರಳುವ ದಿನವನ್ನು ವೈಕುಂಠ ಏಕಾದಶಿಯಾಗಿ ಆಚರಿಸಲಾಗುತ್ತದೆ. ವೈಕುಂಠ ಏಕಾದಶಿಯಂದು ನಾರಾಯಣನ ದರ್ಶನ ಪಡೆದು ವೈಕುಂಠ ದ್ವಾರದ ಮೂಲಕ ಹೊರಬಂದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ನಗರದ ಒಂಟಿಕೊಪ್ಪಲಿನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ, ಜಯನಗರದ ಇಸ್ಕಾನ್ ದೇವಾಲಯ, ಊಟಿ ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮ, ವಿಜಯನಗರದ ಯೋಗ ನರಸಿಂಹ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಹೂಗಳಿಂದ ಸ್ವರ್ಗದ ಬಾಗಿಲು ನಿರ್ಮಿಸಲಾಗಿತ್ತು. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ಸ್ವರ್ಗದ ಬಾಗಿಲ ಮೂಲಕ ದೇವರ ದರ್ಶನ ಪಡೆದರು.
ಒಂಟಿಕೊಪ್ಪಲಿನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ಮುಂಜಾನೆ 5.30 ರಿಂದಲೇ ದೇವಾಲಯಕ್ಕೆ ಪ್ರವೇಶಾವಕಾಶ ಕಲ್ಪಿಸಲಾ ಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ವೈಕುಂಠ ಏಕಾದಶಿ ಅಂಗವಾಗಿ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ವಿಜಯನಗರದ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ವೈಕುಂಠ ದ್ವಾರ ಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ವಿಶೇಷ ಅಲಂಕಾರದೊಂದಿಗೆ ಯೋಗನರಸಿಂಹಸ್ವಾಮಿ ಕಂಗೊಳಿಸಿತು. ದೇವಸ್ಥಾನ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ಜಯನಗರದ ಇಸ್ಕಾನ್ ದೇವಾಲಯದಲ್ಲಿ ನಿರ್ಮಿಸಿದ್ದ ವಿಶಿಷ್ಟವಾದ ವೈಕುಂಠ ದ್ವಾರವನ್ನು ಮುಂಜಾನೆಯೇ ತೆರೆಯಲಾಯಿತು. ಬಳಿಕ ವಿಶೇಷ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಯಿತು. ದೇವಾಲಯದಲ್ಲಿ ನಿರ್ಮಿಸಿದ್ದ ವಿಶಿಷ್ಟ ವೈಕುಂಠ ದ್ವಾರದ ಮೂಲಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿತ್ತು. ಸಾವಿರಾರು ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದರು. ಬೆಳಗ್ಗೆ 6.30ಕ್ಕೆ ವೈಕುಂಠ ದ್ವಾರ ಪೂಜೆ ಮಾಡಲಾಯಿತು. ಶೃಂಗಾರ ಆರತಿ ಬಳಿಕ ಕೃಷ್ಣ-ಬಲರಾಮರ ಪಲ್ಲಕ್ಕಿ ಉತ್ಸವ ನಡೆಯಿತು. ಭಕ್ತರಿಗೆ 7 ರಾತ್ರಿ 10ರವರೆಗೆ ವೈಕುಂಠ ದ್ವಾರ ಪ್ರವೇಶಕ್ಕೆ ಅವಕಾಶ ನೀಡಲಾಯಿತು.
ಇದರೊಂದಿಗೆ ನಗರದ ವಿವಿಧ ವೆಂಕಟೇಶ್ವರಸ್ವಾಮಿ ದೇವಸ್ಥಾನ, ರಾಘವೇಂದ್ರ ಸ್ವಾಮಿ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಆಚರಿಸಲಾಯಿತು. ನಗರದ ವಿವಿಧ ದೇವಾಲಯಗಳಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.