ಹುಣಸೂರು ನಗರದ ಹಾಲಗೆರೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ಭಕ್ತರು ವೈಕುಂಠ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. 
ಮೈಸೂರು

ಹುಣಸೂರಿನಲ್ಲಿ ವೈಕುಂಠ ಏಕಾದಶಿ, ದರ್ಶನ ಪಡೆದ ಭಕ್ತರು

ಎಂ.ರವಿ
ಹುಣಸೂರು: ವೈಕುಂಠ ಏಕಾದಶಿಯ ಅಂಗವಾಗಿ ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ವೈಕುಂಠ ದರ್ಶನಕ್ಕೆ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ನಗರದ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಾಲಯ, ಬ್ರಾಹ್ಮಣರ ಬೀದಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ, ಜೆಎಲ್‌ಬಿ ರಸ್ತೆಯ ಪಾಂಡುರಂಗಸ್ವಾಮಿ ದೇವಾಲಯ, ಹಾಲಗರೆ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇಗುಲ, ಕಟ್ಟೆಮಳಲವಾಡಿಯ ವೆಂಕಟೇಶ್ವರಸ್ವಾಮಿ ದೇವಾಲಯ ಮುಂತಾದ ಕಡೆಗಳಲ್ಲಿ ಭಕ್ತರ ದಂಡು ಬೆಳಗ್ಗಿನಿಂದಲೇ ದೇವಾಲಯಗಳಲ್ಲಿ ಸರದಿ ಸಾಲಿನಲ್ಲಿ ನಿಂತು ವೈಕುಂಠ ದರ್ಶನ ಪಡೆದರು. ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ನಗರದ ಹಾಲಗೆರೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಮೂರನೇ ವರ್ಷದ ವೈಕುಂಠ ಏಕಾದಶಿ ಪೂಜೆ ಮತ್ತು ಜಾತ್ರಾ ಮಹೋತ್ಸವ ನಡೆಯಿತು. ಬ್ರಾಹ್ಮಿ ಮುಹೂರ್ತದಲ್ಲಿ ಸುಪ್ರಭಾತ ಸೇವೆ, ಅಭಿಷೇಕ, ಕಲಾಕರ್ಷಣೆ, ಗೋಪೂಜೆ, ವೈಕುಂಠ ದ್ವಾರಪೂಜೆ, ಅಷ್ಠಬಲಿ ಪೂಜೆ, ಶ್ರೀವಾರಿಯವರ ಪ್ರಾಂಗಣ ಉತ್ಸವ, ಉಯ್ಯಲೆಯಲ್ಲಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ, ನಂತರ ಭಕ್ತಾದಿಗಳಿಗೆ ವೈಕುಂಠ ದ್ವಾರ ಪ್ರವೇಶ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ಮಧ್ಯಾಹ್ನ ಫಲಹಾರ ಸೇವಾಪೂಜೆ, ಸಂಜೆ ಶ್ರೀವಾರಿಯವರಿಗೆ ಪ್ರಾಕಾರೋತ್ಸವ, ನಂತರ ಶಯನೋತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಆಶೀರ್ವಚನ ನಡೆಯಿತು. ಎಲ್ಲ ದೇವಾಲಯಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀವಾರಿ ದರ್ಶನ ಪಡೆದು, ವೈಕುಂಠ ದ್ವಾರ ಪ್ರವೇಶಿಸಿ, ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠದ್ವಾರ ನಿರ್ಮಿಸಿ ಪೂಜೆ ಸಲ್ಲಿಸಿ ಭಕ್ತರಿಗೆ ಲಾಡು ಪ್ರಸಾದ ವಿನಿಯೋಗ ಮಾಡಲಾಯಿತು. ಕಟ್ಟೆಮಳಲವಾಡಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ದ್ವಾರ ನಿರ್ಮಿಸಿ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.