ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಡಾ.ಭಾವನಾ ಗಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಡಾ. ಸುಜಾತಾ ಅಕ್ಕಿ, ಡಾ.ನಿರ್ಮಲ ಮಠಪತಿ, ಶೋಭಾರಾಣಿ ಜೈಪ್ರಕಾಶ್, ಡಾ.ಜಯಪ್ಪ ಹೊನ್ನಾಳಿ ಇದ್ದರು. 
ಮೈಸೂರು

ಮಹಿಳಾ ಸಮಾನತೆಗೆ ವಚನ ಸಾಹಿತ್ಯ ಪಠ್ಯವಾಗಬೇಕು : ರಂಗಕರ್ಮಿ ಡಾ. ಸುಜಾತಾ ಅಕ್ಕಿ

ಮೈಸೂರು: ಮಹಿಳಾ ಸಮಾನತೆ ನಿರ್ಮಾಣವಾಗಲು ವಚನಗಳು ಪಠ್ಯ ವಿಷಯವಾಗಬೇಕು ಎಂದು ರಂಗಕರ್ಮಿ ಡಾ. ಸುಜಾತಾ ಅಕ್ಕಿ ಅಭಿಪ್ರಾಯಪಟ್ಟರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಗರ ಘಟಕ ಮತ್ತು ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣನ್ನು ವಚನಕಾರರು ಎಂದಿಗೂ ಕೀಳಾಗಿ ಕಾಣದೆ ಅವರಿಗೆ ಸಮಾನ ಅವಕಾಶ ನೀಡಿದರು. ಹೆಣ್ಣನ್ನು ಶೋಷಣೆಗೆ ಗುರಿಪಡಿಸುವ ಯಾವುದೇ ಪದ್ಧತಿಗಳು ವಚನಕಾಲದಲ್ಲಿ ಇರಲಿಲ್ಲ ಎಂದು ಹೇಳಿದರು.
ಸಮಾಜದಲ್ಲಿ ಇರುವ ಎಲ್ಲ ಭೇದಗಳನ್ನು ಬಸವಣ್ಣ ಅವರು ಸ್ಥಾಪಿಸಿದ ಅನುಭವ ಮಂಟಪ ತೊಡೆದು ಹಾಕಲು ಪ್ರಯತ್ನಿಸಿತು. ಪ್ರಾದೇಶಿಕ ಭೇದ, ಲಿಂಗ ಭೇದ, ಭಾಷಾ ಭೇದ, ವರ್ಣ ಭೇದವನ್ನು ತೊಡೆದು ಹಾಕಿ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲಾ ಯಿತು. ವಿಶೇಷವಾಗಿ ಮಹಿಳೆಯರಿಗೂ ಸಮಾನ ಅವಕಾಶಗಳು ದೊರೆಯಿತು. ಅನುಭವಮಂಟಪದಲ್ಲಿ 34 ವಚನಕಾರ್ತಿಯರು ಇದ್ದರು ಎಂದು ಹೇಳಿದರು.
ಮಹಿಳೆಯರ ನೋವು ನಲಿವುಗಳಿಗೆ ನಾವೆಲ್ಲರು ಸ್ಪಂದಿಸಬೇಕು. ಮಹಿಳೆಯರು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಧನೆ ತೋರಿದ್ದಾರೆ. ಮಹಿಳೆಯರು ಅಂತರಿಕ್ಷದವರೆಗೂ ಹೋಗಿ ಬಂದಿದ್ದಾರೆ. ಮಹಿಳೆಯರು ತಮ್ಮ ಕೈಯಲ್ಲಾಗುವ ಎಲ್ಲ ಕೆಲಸಗಳನ್ನು ಮಾಡಿ ತೋರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ವಾಣಿಜ್ಯ ತೆರಿಗೆ ಅಧಿಕಾರಿ ಡಾ.ಭಾವನಾ ಗಜೇಂದ್ರ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾವಾ ಆಡಳಿತಾಧಿಕಾರಿ ಡಾ.ನಿರ್ಮಲ ಮಠಪತಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್, ಅಖಿಲ ಭಾರತ ಸರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಡಾ.ಜಯಪ್ಪ ಹೊನ್ನಾಳಿ ಇದ್ದರು.